ದಾವಣಗೆರೆ, ಮೇ 29- ಮೆಕ್ಕೆಜೋಳ ಬೆಳೆದ ರೈತರಿಗೆ ಕೊರೊನಾ ಸಂದರ್ಭದಲ್ಲಿ 5 ಸಾವಿರ ಪರಿಹಾರ ಘೋಷಿಸಲಾಗಿದೆ. ಆದರೆ ಭತ್ತ ಬೆಳೆದು ಸಂಕಷ್ಟದಲ್ಲಿರುವ ರೈತರನ್ನು ರಾಜ್ಯ ಸರ್ಕಾರ ಕಡೆಣಿಸಿದೆ. ಹಾಗಾಗಿ ಭತ್ತ ಬೆಳೆದ ರೈತರಿಗೂ ಸಹ 5 ಸಾವಿರ ಪರಿಹಾರ ಘೋಷಿಸ ಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಚಳುವಳಿ ಹಮ್ಮಿಕೊಂಡಿದೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭತ್ತಕ್ಕೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯ ರೈತರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಲಿದ್ದೇವೆ. ನಾಳೆಯಿಂದಲೇ ಪತ್ರ ಚಳುವಳಿ ಪ್ರಾರಂಭಗೊಳ್ಳಲಿದೆ. ಸಾವಿ ರಾರು ಪತ್ರ ಬರೆದು ಮುಖ್ಯಮಂತ್ರಿ ಗಳಿಗೆ ಪೋಸ್ಟ್ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ. ಈಗಾಗಲೇ ಶೇ.40ರಷ್ಟು ಭತ್ತ ಮಾರಾಟವಾಗಿದೆ. ಉಳಿದಿರುವ ಶೇ. 60ರಷ್ಟು ಭತ್ತಕ್ಕೆ ಪರಿಹಾರ ನೀಡಬೇಕು. ಕೇರಳ ಮಾದರಿ ಬೋನಸ್ ಹಾಗೂ ಭತ್ತಕ್ಕೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾ ಯಿಸಿ ಪತ್ರ ಬರೆಯಲಿದ್ದೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವ ನಹಳ್ಳಿ ಮಂಜುನಾಥ್ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆ ಯಲ್ಲಿ ರೈತರಿಗೆ 4 ಸಾವಿರ ರೂ. ನೀಡುವುದಾಗಿ ಹೇಳಲಾಗಿತ್ತು. ಆದರೆ ಆ ಹಣ ರೈತರ ಖಾತೆಗೆ ಜಮಾವಣೆಯಾಗಿಲ್ಲ. ಇದೀಗ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯ ಹಣಕ್ಕೆ 1 ಸಾವಿರ ಸೇರಿಸಿ 5 ಸಾವಿರ ಪರಿಹಾರ ನೀಡುತ್ತಿದೆ. ರೈತರು 1 ಎಕರೆಗೆ ಮೆಕ್ಕೆಜೋಳ ಬೆಳೆಯಲು 15 ಸಾವಿರ ವೆಚ್ಚ ತಗಲುತ್ತದೆ. ಆದ್ದರಿಂದ ಸರ್ಕಾರ ರೈತರಿಗೆ 15 ಸಾವಿರ ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಭತ್ತ ಬೆಳೆದ ರೈತರೂ ಸಹ ಸಂಕಷ್ಟದಲ್ಲಿದ್ದಾರೆ. ಖರೀದಿದಾರರು ಅತ್ಯಂತ ಕಡಿಮೆ ದರದಲ್ಲಿ ಭತ್ತ ಖರೀದಿ ಮಾಡುತ್ತಿದ್ದಾರೆ. ಆದ್ದರಿಂದ ಕೇರಳ ಮಾದರಿಯಂತೆ 1 ಕ್ವಿಂಟಾಲ್ ಭತ್ತಕ್ಕೆ 540 ರೂ ಬೋನಸ್ಸನ್ನು ರಾಜ್ಯದ ರೈತರಿಗೂ ಸಹ ಕೊಡಬೇಕು. ಕೇಂದ್ರ ಸರ್ಕಾರ 1830 ರೂ. ಹಾಗೂ ರಾಜ್ಯ ಸರ್ಕಾರ ಬೋನಸ್ ರೂಪದಲ್ಲಿ 1500 ನೀಡಬೇಕು. ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಆಲೂರು ಪರಶುರಾಮ, ಕಾಡಜ್ಜಿ ಪ್ರಕಾಶ್, ಭಗತ್‍ಸಿಂಹ ಚಿಕ್ಕಬೂದಿಹಾಳ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.