ಜೀವಕ್ಕಿಂತ ಪರೀಕ್ಷೆ ದೊಡ್ಡದಲ್ಲ
ಸಿರಿಗೆರೆ, ಮೇ 27- ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮರುಪರಿಶೀಲನೆ ಮಾಡಬೇಕು ಎಂದು ಸಾಣೇಹಳ್ಳಿ ಶ್ರೀ ಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಪರೀಕ್ಷಾ ದಿನಾಂಕ ಹತ್ತಿರ ಬರುತ್ತಿದ್ದರೆ ಇನ್ನೊಂದೆಡೆ ದಿನದಿಂದ ದಿನಕ್ಕೆ ಕೊರೊನಾ ಹಾವಳಿಯೂ ಹೆಚ್ಚುತ್ತಲೇ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಕೊರೊನಾ ಕಾಲಿಟ್ಟಿರುವಂಥದ್ದು ಅತ್ಯಂತ ಆತಂಕದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಒಂದು ಊರಿನವರು, ಒಂದು ತಾಲ್ಲೂಕಿನವರು, ಒಂದು ಜಿಲ್ಲೆಯವರಲ್ಲ. ಒಂದೇ ಶಾಲೆಯಲ್ಲಿ ಹಲವಾರು ಜಿಲ್ಲೆಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುತ್ತಾರೆ. ಅವರೆಲ್ಲರ ಪೂರ್ವಾಪರ (ಟ್ರಾವೆಲಿಂಗ್ ಹಿಸ್ಟರಿ) ತಿಳಿಯುವುದು ಕಷ್ಟಸಾಧ್ಯ. ಅವರು ಅಲ್ಲಿಂದ ಪರೀಕ್ಷಾ ಕೇಂದ್ರಕ್ಕೆ ಬರುವಾಗ ಕೊರೊನಾ ಜೊತೆಯಲ್ಲೇ ಬಂದರೆ ಗತಿ ಏನು? ಸ್ಥಳೀಯ ನಾಗರಿಕರು ಸಹ ವಿರೋಧಿಸಬಹುದು. ಇನ್ನು ವಿದ್ಯಾರ್ಥಿಗಳ ವಾಸಸ್ಥಳದ ಸಮೀಪವಿರುವ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವುದಾಗಿ ಶಿಕ್ಷಣ ಮಂತ್ರಿಗಳು ತಿಳಿಸಿದ್ದಾರೆ. ಆದರೂ ಒಂದು ಕೇಂದ್ರದಲ್ಲಿ ಏನಿಲ್ಲವೆಂದರೂ 150-200 ವಿದ್ಯಾರ್ಥಿಗಳು ಒಂದೆಡೆ ಸೇರುವುದು ಆತಂಕದ ವಿಷಯ.
ಏನೇ ಅಂತರ ಕಾಪಾಡಬೇಕೆಂದರೂ ಮಕ್ಕಳಿಗದು ಕೆಲವೊಮ್ಮೆ ಕಷ್ಟಸಾಧ್ಯ. ಇಷ್ಟು ದಿವಸ ಮಾಡಿದ ಪ್ರಯತ್ನಗಳೆಲ್ಲವೂ ಮಣ್ಣು ಪಾಲಾಗುವ ಸಂಭವವೇ ಹೆಚ್ಚು. ಅಷ್ಟಕ್ಕೂ ಪಡೆದ ಶಿಕ್ಷಣವನ್ನು ಮೌಲ್ಯಮಾಪನ ಮಾಡಲು ಇರುವ ಸಾಧನ ಪರೀಕ್ಷೆ. ಪರೀಕ್ಷೆಯೇ ಶಿಕ್ಷಣವಲ್ಲ. ಈಗಾಗಲೇ ಅವರು ವರ್ಷಪೂರ್ತಿ ಶಿಕ್ಷಣವನ್ನು ಪಡೆದು ಕೊಂಡಿದ್ದಾರೆ. ಪರೀಕ್ಷೆಯಿಂದ ವಿದ್ಯಾರ್ಥಿಯ, ಶಾಲಾ-ಕಾಲೇಜುಗಳ ಸ್ಥಾನಮಾನದ ಮಾಪನವಾಗಬಹುದೇ ಹೊರತು ಕಲಿತ, ನೀಡಿದ ಶಿಕ್ಷಣದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ.
ಅಷ್ಟಕ್ಕೂ ಜೀವಕ್ಕಿಂತ ಯಾವ ಪರೀಕ್ಷೆಯೂ ದೊಡ್ಡದಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಪರೀಕ್ಷೆಯನ್ನು ರದ್ದುಪಡಿಸುವುದು ವಿದ್ಯಾರ್ಥಿಗಳ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸೂಕ್ತ, ಯೋಗ್ಯ ನಿರ್ಣಯವಾಗಬಹುದು.
ಆಯಾ ಶಾಲೆಯಲ್ಲಿ ವರ್ಷಪೂರ್ತಿ ನಡೆಸಿದ ನಿರಂತರ ಮೌಲ್ಯಮಾಪನದ ವಹಿ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ವಹಿ ಇದ್ದೇ ಇದೆ. ಇವುಗಳ ಆಧಾರದ ಮೇಲೆ ಆಯಾ ಶಾಲೆಯ ಅಧ್ಯಾಪಕರು ಮತ್ತು ಮುಖಸ್ಥರು ಅಂಕಗಳ ಬದಲಿಗೆ `ಎ, ಬಿ, ಸಿ, ಡಿ’ ಎಂದು ಗ್ರೇಡ್ ಕೊಡಬಹುದು. ಸಮಾಜದ ಹಿತದೃಷ್ಟಿಯಿಂದ ಈ ಬಗ್ಗೆ ಶಿಕ್ಷಣ ಸಚಿವರು ತಜ್ಞರ ಜೊತೆ ಚರ್ಚಿಸಿ ಯೋಗ್ಯ ತೀರ್ಮಾನ ತೆಗೆದುಕೊಳ್ಳಬೇಕು ಎಂದವರು ಆಶಿಸಿದ್ದಾರೆ.