ಕೇಂದ್ರದ ಮುಂದೆ ತುಟಿ ಬಿಚ್ಚದ ಸಂಸದರು : ಈಶ್ವರ ಖಂಡ್ರೆ ಕಿಡಿ

ದಾವಣಗೆರೆ, ಮೇ 27- ಕೇಂದ್ರದ ಬಿಜೆಪಿ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರತಿ ಬಾರಿಯೂ ಅನ್ಯಾಯವಾಗುತ್ತಿದ್ದು,  ರಾಜ್ಯದ ವಿಚಾರವಾಗಿ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗುಡುಗಿದರು.

ಅವರು, ಇಂದು ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬರ, ಪ್ರವಾಹ, ಜಿಎಸ್‍ಟಿ, 15ನೇ ಹಣಕಾಸು ಯೋಜನೆಯಲ್ಲಿ ಸಮರ್ಪಕ ಅನುದಾನ ನೀಡಿಲ್ಲ. ಹೀಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಕರ್ನಾಟಕ ರಾಜ್ಯಕ್ಕೆ ಮಾಡಿದ ಅನ್ಯಾಯವಾಗಿದೆ. ಈ ವಿಚಾರವಾಗಿ ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರಿದ್ದರೂ ಕೇಂದ್ರದ ಮುಂದೆ ತುಟಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದರಲ್ಲದೇ ಕೇಂದ್ರ ಸರ್ಕಾರದ ಈ ನಿಲುವನ್ನು ರಾಜ್ಯದ ಜನತೆಗೆ ಕಾಂಗ್ರೆಸ್ ಜಾಗೃತಗೊಳಿಸುತ್ತಿದೆ ಎಂದು ತಿಳಿಸಿದರು.

ಜಗತ್ತೇ ಕೊರೊನಾದಿಂದ ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲೂ ಕೊರೊನಾ ದಿಂದ ಆತಂಕವಿದೆ. ದೇಶ ಎರಡು ತಿಂಗಳಿನಿಂದ ಲಾಕ್‌ಡೌನ್‌ನಲ್ಲಿದೆ. ಯಾವುದೇ ಪೂರ್ವಸಿದ್ದತೆ, ದೂರದೃಷ್ಟಿ ಇಲ್ಲದೇ ಲಾಕ್ ಡೌನ್ ಘೋಷಿಸಿದ ಪರಿಣಾಮ ವಿಶೇಷವಾಗಿ ವಲಸೆ ಕಾರ್ಮಿಕರು, ಕೃಷಿ ಕಾರ್ಮಿಕರು, ರೈತರು, ಬಡ ಜನರು, ನಿರ್ಗತಿಕರು ಸಂಕಷ್ಟ ಅನುಭವಿಸಿದ್ದಾರೆ. ಆರ್ಥಿಕ ಕುಸಿತವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಮ್ಮ ದೇಶಕ್ಕೆ ಕೊರೊನಾ ಬಂದ ಸಂದರ್ಭದಲ್ಲಿ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿತ್ತು. ಪೂರ್ವ ಸಿದ್ಧತೆ ಮಾಡಿಕೊಳ್ಳ ಬೇಕಿತ್ತು. ಆದರೆ ಕೊರೊನಾ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಟ್ರಂಪ್ ಕಾರ್ಯಕ್ರಮದ ಅವಶ್ಯಕತೆ ಇತ್ತಾ?, ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮಾಡುವ ಅಗತ್ಯವಿತ್ತಾ? ಎಂದು ಆಕ್ಷೇಪಿಸಿದರು.

ದೇಶದ ಆರ್ಥಿಕತೆಯ ಭದ್ರ ಬುನಾದಿಯಾಗಿರುವ ವಲಸೆ ಕಾರ್ಮಿ ಕರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸರ್ಕಾರವು ಆಹಾರ, ಆಶ್ರಯ, ಭದ್ರತೆ, ಸಾರಿಗೆ ವ್ಯವಸ್ಥೆ ಇಲ್ಲದೇ ನೂರಾರು ಕಾರ್ಮಿಕರು ನಾನಾ ಅಪಘಾ ತಗಳಿಂದ ಜೀವ ಕಳೆದುಕೊಂಡರು. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇಂತಹ ಪರಿಸ್ಥಿತಿ ಎಂದೂ ಬರಲಿಲ್ಲ ಎಂದು ಹೇಳಿದರು.

ಸರ್ಕಾರದ ಗೌಪ್ಯ ಆಡಳಿತ: ರಾಜ್ಯದಲ್ಲಿ ಬಿ.ಎಸ್. ಯಡಿರಯೂರಪ್ಪ ಅವರ ಸರ್ಕಾರ ಗೌಪ್ಯವಾಗಿ ಆಡಳಿತ ನಡೆಸುತ್ತಿದೆ. ಎಲ್ಲವೂ ಪಾರದರ್ಶಕತೆ ಯಲ್ಲಿ ಆಡಳಿತ ನಡೆಸಲಾಗುತ್ತಿದೆ ಎಂದು ಹೇಳುವ ಈ ಸರ್ಕಾರ ಮಾಧ್ಯಮದ ವರನ್ನು ದೂರವಿಟ್ಟು ಸಭೆಗಳನ್ನು ನಡೆ ಸುತ್ತಿದೆ. ಮಂತ್ರಿಗಳು ನಡೆಸುವ ಸಭೆ ಯಲ್ಲಿ ಅವರನ್ನು ದೂರ ಇಡಲಾಗಿದೆ. ಇಂ ತಹದ್ದೇ ಪರಿಸ್ಥಿತಿ ವಿಧಾನ ಸಭೆಯಲ್ಲೂ ಮಾಡಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲವೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಜಾಧವ್, ಪಾಲಿಕೆ ವಿರೋಧ ಪಕ್ಷ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ, ಮುಖಂಡರಾದ ಸೈಯದ್ ಸೈಫುಲ್ಲಾ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.

error: Content is protected !!