ದಾವಣಗೆರೆ, ಮೇ 27 – ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವ ಜೊತೆಗೆ, ರಾಜ್ಯ ಸರ್ಕಾರದ ಆದಾಯ ಹೆಚ್ಚಿಸುವ ಸಲುವಾಗಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಇಳಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನೋಂದಣಿ ಶುಲ್ಕ ಕಡಿಮೆ ಮಾಡಿದರೆ, ನೋಂದಣಿಗಳು ಹೆಚ್ಚಾಗುತ್ತವೆ. ಜಿಪಿಎ ಹಾಗೂ ಒಪ್ಪಂದಗಳ ಸಂಖ್ಯೆಗಳು ಕಡಿಮೆಯಾಗಿ ನೋಂದಣಿಗಳನ್ನು ಹೆಚ್ಚು ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಇದರಿಂದಾಗಿ ಜನರಿಗೆ ಅನುಕೂಲವಾಗುವ ಜೊತೆಗೆ, ಸರ್ಕಾರದ ಆದಾಯವೂ ಹೆಚ್ಚಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.
ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳು ಅಸಾಮಾನ್ಯವಾಗಿ ಹೆಚ್ಚಾಗಿವೆ ಎಂಬ ದೂರುಗಳಿವೆ. ಈ ದರವನ್ನು ಇಳಿಕೆ ಮಾಡಲು ನಿರ್ಧರಿಸಿ, ರಾಜ್ಯಾದ್ಯಂತ ಸಮೀಕ್ಷೆ ನಡೆಸ ಲಾಗುವುದು. ಜನರು ನೀಡಿರುವ ದೂರುಗಳನ್ನು ಆಧರಿಸಿ ಇಳಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಅಶೋಕ್ ಹೇಳಿದ್ದಾರೆ.
ಮಧ್ಯಮ ವರ್ಗಕ್ಕೆ ನೆರವಾಗುವ ಸಲುವಾಗಿ ರಾಜ್ಯ ಸರ್ಕಾರ 35 ಲಕ್ಷ ರೂ.ಗಳವರೆಗಿನ ಮನೆಗಳ ನೋಂದಣಿ ಶುಲ್ಕವನ್ನು ಶೇ.5.6ರಿಂದ ಶೇ.2ರವರೆಗೆ ಇಳಿಕೆ ಮಾಡಿದೆ. ಹೀಗಾಗಿ ಮಧ್ಯಮ ವರ್ಗದವರು ಮನೆ ಖರೀದಿಸಲು ಇದು ಸುಸಂದರ್ಭವಾಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತಿತರರು ಉಪಸ್ಥಿತರಿದ್ದರು.