ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ
ದಾವಣಗೆರೆ, ಮೇ 26 – ರಾಜ್ಯಾದ್ಯಂತ ನಗರಗಳಲ್ಲಿ ನಿರ್ಮಿಸಲಾಗಿರುವ ಅಕ್ರಮ ಬಡಾವಣೆಗಳಲ್ಲಿನ ಮನೆಗಳನ್ನು ಸಕ್ರಮಗೊಳಿಸುವ ಮೂಲಕ ಸರ್ಕಾರ ಆದಾಯ ಪಡೆಯುವ ಜೊತೆಗೆ ಜನರಿಗೆ ನೆರವು ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಬೆಂಗಳೂರು ಮಹಾನಗರದಲ್ಲಿ ಅನುಮೋದನೆ ಇಲ್ಲದೇ ಇರುವ ಮನೆಗಳನ್ನು ಸಕ್ರಮಗೊಳಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಅದೇ ಕ್ರಮವನ್ನು ರಾಜ್ಯಾದ್ಯಂತ ನಗರಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ದಂಡ ವಿಧಿಸಿ ಸಕ್ರಮಗೊಳಿಸುವುದರಿಂದ ರಾಜ್ಯ ಸರ್ಕಾರಕ್ಕೆ ಆದಾಯ ಸಿಗಲಿದೆ ಹಾಗೂ ಜನರು ನೆಮ್ಮದಿಯಿಂದ ಇರಬಹುದಾಗಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರ, ರಾಜ್ಯ ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಲಿದೆ ಎಂದವರು ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಎಸ್‌ಎಫ್‌ಸಿ ಹಾಗೂ 14ನೇ ಹಣಕಾಸು ಯೋಜನೆಯ ಅನುದಾನ ಕಡಿತಗೊಳಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಗರಾಭಿವೃದ್ಧಿ ಇಲಾಖೆಗೆ ಅನುದಾನ ಕಡಿತವಾಗಿದೆಯಾದರೂ, ವಿಶೇಷ ಗ್ರಾಂಟ್ ಮೂಲಕ ಹೆಚ್ಚುವರಿ ಹಣ ಸಿಗುತ್ತಿದೆ ಎಂದು ಸಮರ್ಥಿಸಿಕೊಂಡರು. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇನೆ. ಆಗಿರುವ ಕೊರತೆ ಭರಿಸಲು ಕ್ರಮ ತೆಗೆದುಕೊಳ್ಳಲು ಕೇಳಿದ್ದೇನೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ನಾಲ್ಕು ಸ್ಮಾರ್ಟ್ ಸಿಟಿ : ರಾಜ್ಯಕ್ಕೆ ಇನ್ನೂ ನಾಲ್ಕು ಸ್ಮಾರ್ಟ್ ಸಿಟಿಗಳ ಅಗತ್ಯವಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಕಾರ ಕೋರಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಗುಲ್ಬರ್ಗ, ಬಿಜಾಪುರ, ಮೈಸೂರು ಹಾಗೂ ಬಳ್ಳಾರಿಗಳನ್ನು ಸ್ಮಾರ್ಟ್ ಸಿಟಿ ಮಾಡುವ ಉದ್ದೇಶವಿದೆ ಎಂದವರು ಹೇಳಿದರು.