ಕೊರೊನಾ ಕೊಂಡಿ ಕತ್ತರಿಸಿರುವುದರಿಂದ ನಗರದಲ್ಲಿ ಸೋಂಕು ಕಡಿಮೆಯಾಗಿದೆ

ದಾವಣಗೆರೆ, ಮೇ 26 – ಕೊರೊನಾ ಕೊಂಡಿಯನ್ನು ಕತ್ತರಿಸಿರುವುದರಿಂದ ನಗರದಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈಗಾಗಲೇ 50 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದವರು ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಒಂದೇ ದಿನ 11 ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಒಂದೇ ದಿನದಲ್ಲಿ ಆದ ಬೆಳವಣಿಗೆ ಅಲ್ಲ. ಕಳೆದ ಕೆಲ ದಿನಗಳ ವರದಿಗಳ ಫಲಿತಾಂಶ ಬಂದಿದೆ. ಹೀಗಾಗಿ ದಿನಕ್ಕೆ ಒಂದೆರಡು ಪ್ರಕರಣಗಳು ಮಾತ್ರ ಕಂಡು ಬರುತ್ತಿವೆ ಎಂದು ಹೇಳಿದರು.

ಕಂಟೈನ್‌ಮೆಂಟ್‌ ವಲಯದ ಉಸ್ತುವಾರಿ ಹೊತ್ತುಕೊಂಡಿರುವ ಅಧಿಕಾರಿಗಳು ಹೆಚ್ಚಿನ ಪ್ರಮಾಣದ ಪರೀಕ್ಷೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನಗರದ ಎಸ್.ಎಸ್. ಆಸ್ಪತ್ರೆಯಲ್ಲಿ ಕೊರೊನಾ ಲ್ಯಾಬ್ ಸ್ಥಾಪನೆಯಾಗಿದೆ. ಇಂದು ಮಂಗಳವಾರ ಜೆ.ಜೆ.ಎಂ. ಆಸ್ಪತ್ರೆಯಲ್ಲಿ ಲ್ಯಾಬ್ ಉದ್ಘಾಟಿಸಿದ್ದೇನೆ. ಶೀಘ್ರದಲ್ಲೇ ಸಿ.ಜಿ. ಆಸ್ಪತ್ರೆಯಲ್ಲೂ ಕೊರೊನಾ ಲ್ಯಾಬ್ ಉದ್ಘಾಟನೆಯಾಗಲಿದೆ. ಇದರಿಂದಾಗಿ ತ್ವರಿತ ಪರೀಕ್ಷೆಗೆ ನೆರವಾಗಲಿದೆ ಎಂದು ಸಚಿವ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿ.ಜಿ. ಆಸ್ಪತ್ರೆಗೆ 25 ಕೋಟಿ ರೂ. ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಸಿ.ಜಿ. ಆಸ್ಪತ್ರೆಯೂ ಸಹ ನಗರದ ಇತರೆ ಖಾಸಗಿ ಆಸ್ಪತ್ರೆಗಳ ರೀತಿಯಲ್ಲೇ ಅಭಿವೃದ್ಧಿಯಾಗಬೇಕು ಎಂಬುದು ತಮ್ಮ ಉದ್ದೇಶವಾಗಿದೆ ಎಂದವರು ತಿಳಿಸಿದ್ದಾರೆ.

ಸಿ.ಜಿ. ಸರ್ಕಾರಿ ಆಸ್ಪತ್ರೆಯಲ್ಲೂ ಟೆಸ್ಟಿಂಗ್ ಸೌಲಭ್ಯ ಕಲ್ಪಿಸಬೇಕೆಂದು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ. ಎರಡು ಏಜೆನ್ಸಿಗಳು ಉಪಕರಣ ಒದಗಿಸುವುದನ್ನು ವಿಳಂಬ ಮಾಡಿದ್ದವು. 

ಈಗ ಜೆ.ಜೆ.ಎಂ. ಆಸ್ಪತ್ರೆಯಲ್ಲಿರುವ ಯಂತ್ರವನ್ನೇ ಅಳವಡಿಸಲು ನಿರ್ಧರಿಸಲಾಗಿದೆ. ಅದೇ ಕಂಪನಿ ಉಪಕರಣ ಪೂರೈಸಲು ಸಮ್ಮತಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ನಗರಾಭಿವೃದ್ಧಿ ಇಲಾಖೆಯ  ನಿರ್ದೇಶಕಿ ಬಿ.ಬಿ. ಕಾವೇರಿ,  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!