ಅನುಭವ ಇಲ್ಲದವರ ಕೈಗೆ ಪಾಲಿಕೆ ಸಿಕ್ಕಿರುವುದೇ ಆಡಳಿತ ದಿಕ್ಕೆಡಲು ಕಾರಣ : ದಿನೇಶ್ ಕೆ.ಶೆಟ್ಟಿ
ದಾವಣಗೆರೆ, ಮೇ 25- ಕೊರೊನಾ ಸಂಕಷ್ಟದ ನಡುವೆಯೇ ನಗರ ಪಾಲಿಕೆಯು ಕಂದಾಯದ ಬರೆ ಹಾಕುವ ಮೂಲಕ ನಗರದ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ವ ಸದಸ್ಯರ ಸಭೆಯನ್ನೂ ಕರೆಯದೇ ಪಾಲಿಕೆ ಅಧಿಕಾರಿಗಳು ಏಕಾಏಕಿ ಮನೆ ಕಂದಾಯ ಹೆಚ್ಚಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಖಂಡಿಸಿದ್ದಾರೆ.
ಪಾಲಿಕೆಯು 2019-20ನೇ ಸಾಲಿನ ಕಂದಾಯ ಪಾವತಿಸಲು ಖಾತೆದಾರರು ಪಾಲಿಕೆ ಕಂಪ್ಯೂಟರ್ ಮೂಲಕ ರಸೀದಿ ಪಡೆದು, ಕಂದಾಯ ಕಟ್ಟಲು ಮುಂದಾಗಿದ್ದ ವೇಳೆ ಕಂದಾಯವು ಸಾಕಷ್ಟು ಏರಿಕೆಯಾಗಿರುವುದು ತಿಳಿದು ಬಂದಿದೆ. ಈ ಹಿಂದೆ, 1799 ರೂ. ಬರುತ್ತಿದ್ದ ಕಂದಾಯ ಈಗ ದಿಢೀರನೇ ದುಪ್ಪಟ್ಟಾಗಿ 3518 ರೂ.ಗಳಿಗೆ ಏರಿಕೆಯಾಗಿದೆ. ಇದು ಜನರಿಗೆ ಹೊರೆಯಾಗಲಿದೆ. ಯಾವುದೇ ಅನುಭವ ಇಲ್ಲದವರಿಗೆ ಆಡಳಿತ ಚುಕ್ಕಾಣಿ ಸಿಕ್ಕಿರುವುದು ಇಡೀ ಆಡಳಿತವೇ ದಿಕ್ಕೆಟ್ಟು ಹೋಗಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಮೇಯರ್, ಆಯುಕ್ತ, ಅಕೌಂಟ್ಸ್ ವಿಭಾಗ ಹೀಗೆ ಪಾಲಿಕೆಯ ಬಹುತೇಕ ಕಡೆ ಪರ್ಸೆಂಟೇಜ್ ಪಡೆಯುವ ಮೂಲಕ ಅವ್ಯವಹಾರ ನಡೆಸಲಾಗುತ್ತಿದೆ. ತಮ್ಮಲ್ಲಿ ಸಂಬಂ ಧಿಸಿದ ದಾಖಲೆಗಳಿವೆ ಎಂದು ತಿಳಿಸಿದರು.
30 ಸಾವಿರ ಕಿಟ್ಗಳನ್ನು ಪಾಲಿಕೆಯಿಂದ ನೀಡಲಾಗಿದೆ. ಆದರೆ, ಫುಡ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಮೇಯರ್ ತಮಗೆ ಬೇಕಾದವರಿಂದ ಟೆಂಡರ್ ಹಾಕಿಸಿ, ಅವ್ಯವಹಾರ ನಡೆಯಲು ಕಾರಣರಾಗಿದ್ದಾರೆ. ಮೇಯರ್ ವಾರ್ಡ್ಗೆ ಬೇರೆ ಕಿಟ್, ಪಾಲಿಕೆ ಸದಸ್ಯರ ವಾರ್ಡ್ಗಳಿಗೆ ಮತ್ತೊಂದು ರೀತಿ ಕಿಟ್ ನೀಡಲಾಗಿದೆ ಎಂದು ದೂರಿದರಲ್ಲದೇ, ಈ ರೀತಿ ಕಿಟ್ ಏಕೆ ಎಂಬ ಬಗ್ಗೆ ಮೇಯರ್ ಉತ್ತರಿಸಲಿ ಎಂದರು.
ಚರ್ಚಿಸುವವರೆಗೆ ಕಂದಾಯ ಹೆಚ್ಚಿಸಬಾರದು : 3 ವರ್ಷಕ್ಕೊಮ್ಮೆ ಮನೆ ಕಂದಾಯ ಹೆಚ್ಚಿಸಬೇಕೆಂಬ ಆದೇಶವಿದೆ. ಅದೂ ಜನರಿಗೆ ಹೊರೆಯಾಗದಂತೆ ಶೇ.15-30ರಷ್ಟು ಮಾತ್ರ ಹೆಚ್ಚಿಸಲು ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಬೇಕು. ಆದರೆ, ಪಾಲಿಕೆ ಅಧಿಕಾರಿಗಳು ಏಕಪಕ್ಷೀಯವಾಗಿ ಕಂದಾಯ ಹೆಚ್ಚಿಸಿದ್ದು ಖಂಡನೀಯ. ಸಭೆಯಲ್ಲಿ ಚರ್ಚಿಸುವವರೆಗೆ ಯಾವುದೇ ಕಾರಣಕ್ಕೂ ಕಂದಾಯ ಹೆಚ್ಚಿಸಬಾರದು.
– ಎ. ನಾಗರಾಜ್, ಪಾಲಿಕೆ ವಿಪಕ್ಷ ನಾಯಕ, ನಗರ ಪಾಲಿಕೆ.
ಪಾಲಿಕೆ ಅವ್ಯವಹಾರಗಳಿಂದ ಯಾರಿಗೂ ಟ್ರೇಡ್ ಲೈಸೆನ್ಸ್ ಸಿಗುತ್ತಿಲ್ಲ. ಈ ಬಗ್ಗೆ ಮನವಿ ಮಾಡಿದರೆ ಜನಪರ ಕಾಳಜಿಯ ತಮ್ಮ ಮಾತುಗಳಿಗೆ ಬೇರೆ ಅರ್ಥ ನೀಡಿ, ತಪ್ಪಾಗಿ ಬಿಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಮುಂದಿನ 4 ವರ್ಷ ಕೆಲಸ ಮಾಡಿ ಅನುಭವದ ನಂತರ ನನ್ನ ವಿರುದ್ಧ ಆರೋಪ ಮಾಡಲಿ. ಸ್ವತಃ ಉಪ ಮೇಯರ್ ಅವರನ್ನೇ ಕಡೆಗಣಿಸಲಾಗುತ್ತಿದ್ದು, ಉಪ ಮೇಯರ್ಗೆ ಯಾವುದೇ ಸಭೆಗೂ ಆಹ್ವಾನಿಸುತ್ತಿಲ್ಲ. ಸೌಮ್ಯ ನರೇಂದ್ರ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದವರು. ಮೇಯರ್ ಚುನಾವಣೆಯಲ್ಲಿ ಯಾವ ಕಾರಣಕ್ಕೆ ಬಿಜೆಪಿಗೆ ಬೆಂಬಲಿಸಿದ್ದಾರೆಂದು ಆತ್ಮಸಾಕ್ಷಿಯಿಂದ ಸತ್ಯವನ್ನು ಜನರ ಮುಂದಿಡಲಿ. ಎಷ್ಟು ಹಣ ಪಡೆದಿದ್ದಾರೆಂಬ ವಿಷಯ ಸ್ಪಷ್ಟಪಡಿಸಲಿ ಎಂದು ಟಾಂಗ್ ನೀಡಿದರು.
ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ, ಕಳೆದ 3 ಅವಧಿಯ ಕಾಂಗ್ರೆಸ್ ಆಳ್ವಿಕೆ ವೇಳೆ ಶೇ.15 ಮನೆ ಕಂದಾಯ, ಶೇ.20 ವಾಣಿಜ್ಯ ಕಂದಾಯ ಹೆಚ್ಚಿಸಿದ್ದೆವು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಗಲು ದರೋಡೆಯಾಗುತ್ತಿದೆ. ಕೌನ್ಸಿಲ್ ಸಭೆ ನಡೆಸದೇ ಪಾಲಿಕೆ ಅಧಿಕಾರಗಳೇ ಕರ ನಿರ್ಧಾರ ಮಾಡಿದ್ದು, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಮನೆ ಕಂದಾಯ ಪಾವತಿಸಲು ಶೇ.5 ವಿನಾಯಿತಿ ನೀಡಿ ಜೂನ್ 30ರವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ್, ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಯುವರಾಜ್ ಸೇರಿದಂತೆ ಇತರರು ಇದ್ದರು.