ಖಾಸಗಿ ಬಸ್‌ಗಳ ಸಂಚಾರ ಬಂದ್‌ನಿಂದ ನಷ್ಟ – ಸಂಕಷ್ಟ

ತೆರಿಗೆ ಮನ್ನಾ – ವಿನಾಯಿತಿಗಾಗಿ ಮಾಲೀಕರ ಒತ್ತಾಯ

ದಾವಣಗೆರೆ, ಮೇ.23- ಲಾಕ್‍ಡೌನ್‍ ಪರಿಣಾಮ ಖಾಸಗಿ ಬಸ್ ಗಳ ಸಂಚಾರ ಬಂದ್ ಆಗಿ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಾ ಸಂಕಷ್ಟದಲ್ಲಿದ್ದು, ಸರ್ಕಾರ ಡಿಸೆಂಬರ್ 2020ರವರೆಗೆ ತೆರಿಗೆ ಮನ್ನಾ ಹಾಗೂ 2021ರ  ಮಾರ್ಚ್ ವರೆಗೆ ಶೇ.50 ರಷ್ಟು ತೆರಿಗೆ ಪಾವತಿಸಲು ಅನುವು ಮಾಡಿಕೊಡಬೇಕೆಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘವು ಆಗ್ರಹಿಸಿದೆ.

ಕೋವಿಡ್-19 ವೈರಾಣುವಿನಿಂದಾಗಿ ಮತ್ತು ಲಾಕ್ ಡೌನ್ ಪರಿಣಾಮ ಮಾರ್ಚ್ 24 ರಿಂದಲೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಆದೇಶದಂತೆ ಖಾಸಗಿ ಬಸ್‍ಗಳ ಸಂಪೂರ್ಣ ಸಂಚಾರ ನಿಲುಗಡೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಖಾಸಗಿ ಬಸ್ ಗಳನ್ನು ತೆರಿಗೆ ಉಳಿಸುವ ಸಲುವಾಗಿ ಆರ್ ಟಿಓ ಗಳಿಂದ ಆದೇಶ ಬಂದ ಮೇಲೆ ಅನುಪಯುಕ್ತತೆಗೆ ಸರೆಂಡರ್ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಆದೇಶ ಬರುವವರೆಗೂ ಬಸ್‍ಗಳ ಸಂಚಾರ ಮಾಡಲಾಗುವುದಿಲ್ಲ. ಆದ್ದರಿಂದ ಆದೇಶ ಬಂದ ನಂತರ 2 ತ್ರೈಮಾಸಿಕ ತೆರಿಗೆಗಳನ್ನು ಮನ್ನಾ ಮಾಡಿ ಒಂದು ತ್ರೈಮಾಸಿಕ ತೆರಿಗೆಯನ್ನು ಶೇ. 50 ರಷ್ಟು ವಿನಾಯಿತಿ ನೀಡಿ ಅನುಕೂಲ ಮಾಡಬೇಕು. ಇಲ್ಲವಾದಲ್ಲಿ ಖಾಸಗಿ ಬಸ್ ಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎ.ಎಸ್. ಮಲ್ಲೇಶಪ್ಪ ಮಾಲೀಕರ ಸಂಕಷ್ಟದ ಅಳಲಿಟ್ಟರು.

ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಸಹ ಮನವಿ ಮಾಡಲಾಗಿದೆ. ಜೂನ್ 2 ರಂದು ತುಮಕೂರಿನಲ್ಲಿ ಎಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಸಭೆ ನಡೆಸಿ, ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಬಸ್ ಗಳ ಕಂತು ಪಾವತಿಸ ಬೇಕು. ಬಸ್ ಕಂಡಕ್ಟರ್ ಹಾಗೂ ಚಾಲಕರಿಗೆ ತಲಾ 5 ಸಾವಿರ ಪರಿಹಾರ ನೀಡಬೇಕು, ಖಾಸಗಿ ಮಾರ್ಗದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳನ್ನು ಪ್ರಯಾಣಿಕರಿಲ್ಲದಿದ್ದರೂ ಕಡಿಮೆ ದರದಲ್ಲಿ ಸಂಚಾರ ಮಾಡಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು. 

ಇನ್ನು ಕೋವಿಡ್-19 ನಿಂದಾಗಿ ಪ್ರಯಾಣಿಕರ ಸಾಗಾಟದ ಸಂಖ್ಯೆಯು ಪ್ರತಿ ಬಸ್ ಗೆ 48 ಜನರ ಬದಲಿಗೆ ಕೇವಲ 33 ಜನರಿಗೆ ಮಾತ್ರ ಅವಕಾಶ ನೀಡಬೇಕಾ ಗುತ್ತದೆ. ಇದರಿಂದ ನಮಗೆ ನಷ್ಟವಾಗುತ್ತದೆ. ನಮಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಕಳೆದ 2 ತಿಂಗಳಿನಿಂದಲೂ ಸಂಚಾರವಿಲ್ಲದೇ ನಮ್ಮ ಬಸ್ ಗಳು
ರಿಪೇರಿಗೆ ಬಂದಿವೆ. ಟೈಯರ್ ಗಳು ಸೇರಿದಂತೆ ವಿವಿಧ ಭಾಗಗಳನ್ನು ಸರಿಪಡಿಸುವ ಅವಶ್ಯಕತೆಯಿದೆ. ಸರಿ ಸುಮಾರು ಒಂದರಿಂದ ಒಂದೂವರೆ ಲಕ್ಷ ರಿಪೇರಿಗೆ ವೆಚ್ಚ ಮಾಡಬೇಕಾಗಿದೆ. ಆದ್ದರಿಂದ ನಮಗೆ ತೆರಿಗೆ ಹೊರೆ ಕಡಿಮೆ ಮಾಡಿದರೆ ಆರ್ಥಿಕ ನಷ್ಟ ಸರಿದೂಗಿಸಲು ಸಾಧ್ಯವಾಗುತ್ತದೆಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ಸತೀಶ್, ಮಹೇಶ್ ಇದ್ದರು.

error: Content is protected !!