ತಿಂಗಳಿಗೆ 600ಕ್ಕೂ ಹೆಚ್ಚು ಹೆರಿಗೆಗಳು, ಸ್ಟಾಫ್ ನರ್ಸ್, ಟೆಕ್ನೀಷಿಯನ್ಗಳ ಕೊರತೆ
ದಾವಣಗೆರೆ, ಮೇ 22 – ಕೊರೊನಾ ಕಾರಣದಿಂದಾಗಿ ನಗರದ ಸಿ.ಜಿ. ಜಿಲ್ಲಾ ಆಸ್ಪತ್ರೆಯಲ್ಲಿದ್ದ ಹೆರಿಗೆ ವಿಭಾಗವನ್ನು ನಗರದ ಹಳೆ ಹೆರಿಗೆ ಆಸ್ಪತ್ರೆಗೆ ವರ್ಗಾಯಿಸಿರುವುದು ಹಾಗೂ ಕೊರೊನಾ ಸೋಂಕು ಕಾರಣದಿಂದಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕಾರಣದಿಂದಾಗಿ ಹಳೆ ಆಸ್ಪತ್ರೆಯ ಮೇಲಿನ ಒತ್ತಡ ಹೆಚ್ಚಾಗಿದೆ.
150 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಈ ಹಿಂದೆ ತಿಂಗಳಿಗೆ 400ರಿಂದ 450 ಹೆರಿಗೆಗಳು ಆಗುತ್ತಿದ್ದವು. ಈಗ ಪ್ರತಿನಿತ್ಯ ಆರರಿಂದ ಏಳು ಸಿಜೇರಿಯನ್ ಸೇರಿದಂತೆ, ಪ್ರತಿದಿನ 20ರಿಂದ 25 ಹೆರಿಗೆಗಳು ಆಗುತ್ತಿವೆ. ತಿಂಗಳಿಗೆ ಕನಿಷ್ಠ 600 ಹೆರಿಗೆಗಳು ಈ ಆಸ್ಪತ್ರೆಯಲ್ಲಿ ನೆರವೇರುವ ಅಂದಾಜಿದೆ.
ಚಿಗಟೇರಿ ಆಸ್ಪತ್ರೆಯಲ್ಲಿನ ಹೆರಿಗೆ ವಿಭಾಗವನ್ನು ಮೇ 13ರಂದು ಹಳೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಲ್ಲಿನ ವೈದ್ಯರನ್ನು ಹಳೆ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಹಳೆ ಹೆರಿಗೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಹಾಗೂ ಲ್ಯಾಬ್ ಟೆಕ್ನೀಷಿಯನ್ಗಳ ಕೊರತೆ ಮುಂದುವರೆದಿದೆ.
ಕೊರೊನಾ ಕಾರಣದಿಂದಾಗಿ ಎಲ್ಲಾ ವೈದ್ಯಕೀಯ ಸಿಬ್ಬಂದಿಯನ್ನು ಏಕಕಾಲಕ್ಕೆ ನಿಯೋಜಿಸಲು ಸಾಧ್ಯವಿಲ್ಲ ದಂತಾಗಿದೆ. ಬೇರೆ ಬೇರೆ ಪಾಳೆಯಲ್ಲಿ ಸಿಬ್ಬಂದಿಯನ್ನು ನೇಮಿ ಸುತ್ತಿರುವುದು ಹೊರೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಆಸ್ಪತ್ರೆಯಲ್ಲೇ ಗಂಟಲು ದ್ರವದ ಮಾದರಿ ಸೂಕ್ತ : ಪ್ರಸಕ್ತ ಹೆರಿಗೆಗೆ ಬರುವವರು ಕೊರೊನಾ ಚಿಕಿತ್ಸೆಗೆ ಒಳಗಾಗಲು ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್ ಕೇಂದ್ರಕ್ಕೆ ತೆರಳಬೇಕಿದೆ. ಇದು ಹೆರಿಗೆಗೆ ಬರುವವರಿಗೆ ಸಮಸ್ಯೆ ತರುತ್ತಿದೆ. ಕಂಟೈನ್ಮೆಂಟ್ ವಲಯದಿಂದ ಬಂದವರಿಗೆ ಕೊರೊನಾ ಪರೀಕ್ಷೆ ಕಡ್ಡಾಯವಿದ್ದರೂ ಹಲವು ರೋಗಿಗಳು ಸಹಕರಿಸುತ್ತಿಲ್ಲ. ಗಂಟಲು ದ್ರವದ ಮಾದರಿ ನೀಡಲು ರಂಪಾಟ ಮಾಡಿ, ಗದ್ದಲ ನಡೆಸಿದ ಘಟನೆಯೂ ನಡೆದಿದೆ. ಸಿ.ಜಿ.ಆಸ್ಪತ್ರೆಗೆ ತೆರಳಿ ಗಂಟಲು ದ್ರವದ ಮಾದರಿ ನೀಡಲು ತಿಳಿಸಿದರೆ, ಸಾಕಷ್ಟು ಜನರು ನೆಪ ಹೇಳುತ್ತಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಸಮಸ್ಯೆಗಳನ್ನು ನೀಗಿಸಲು ಹೆರಿಗೆ ಆಸ್ಪತ್ರೆಯಲ್ಲೇ ಗಂಟಲು ದ್ರವದ ಮಾದರಿ ಪಡೆ ಯಲು ವ್ಯವಸ್ಥೆ ಮಾಡಲು ಈಗಾಗಲೇ ಮನವಿ ಸಲ್ಲಿ ಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಂಡಲ್ಲಿ ಗಂಟಲು ದ್ರವದ ಮಾದರಿ ನೀಡಲು ಗರ್ಭಿಣಿ ಯರು ಅಲೆದಾಡುವುದು ತಪ್ಪಲಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ. ಜೆ.ಬಿ. ನೀಲಕಂಠ ತಿಳಿಸಿದ್ದಾರೆ.
ಕಂಟೈನ್ಮೆಂಟ್ ವಲಯದ ಒತ್ತಡ : ಕೊರೊನಾ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯದಿಂದ ಬರುವ (1ನೇ ಪುಟದಿಂದ) ಪ್ರಕರಣಗಳನ್ನು ಪ್ರತ್ಯೇಕ ವಾರ್ಡ್ಗಳಲ್ಲಿ ಇರಿಸಬೇಕಾಗಿದೆ. ಇದಕ್ಕಾಗಿ ಸರ್ಕಾರದ ಮಾರ್ಗಸೂಚಿಯಂತೆ ಹೆರಿಗೆ ದಿನಾಂಕದ ಅಂದಾಜಿನ 14 ದಿನಗಳ ಮುಂಚೆ ಕೊರೊನಾ ಪರೀಕ್ಷೆಗೆ ಒಳಗಾಗಬೇಕಿದೆ. ಕಂಟೈನ್ಮೆಂಟ್ ವಲಯದಿಂದ ಬಂದವರ ಹೆರಿಗೆ ಸಮಯದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಪಿಪಿಇ ಕವರಾಲ್ ಕಿಟ್ಗಳನ್ನು ಬಳಸುವುದು ಕಡ್ಡಾಯವಾಗಿದೆ. ಆದರೆ, ತುರ್ತು ಸಂದರ್ಭಗಳಲ್ಲಿ ಕೊರೊನಾ ಪರೀಕ್ಷೆಗೆ ಅವಕಾಶವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅನಿವಾರ್ಯ ವಾಗಿ ಚಿಕಿತ್ಸೆ ನೀಡುವ ಪರಿಸ್ಥಿತಿ ಉಂಟಾಗುತ್ತಿದೆ. ಆ ಸಂದರ್ಭದಲ್ಲೂ ಚಿಕಿತ್ಸೆ ನೀಡುತ್ತಿರುವುದಾಗಿ ಇಲ್ಲಿನ ವೈದ್ಯರು ಹೇಳಿದ್ದಾರೆ.
ಪರೀಕ್ಷೆಗೆ ಹಿಂಜರಿಕೆ : ಮೇ ತಿಂಗಳಲ್ಲಿ ಕಂಟೈನ್ ಮೆಂಟ್ ವಲಯಗಳಿಂದ 48 ಜನ ಗರ್ಭಿಣಿಯರು ಹೆರಿಗೆಗಾಗಿ ದಾಖಲಾಗಿದ್ದಾರೆ. ಆದರೆ, ಇವರ ಪೈಕಿ ಕೊರೊನಾ ಪರೀಕ್ಷೆಗೆ ಒಳಗಾದವರು ಕೇವಲ ಏಳು ಜನ ಮಾತ್ರ. ನಿನ್ನೆ ಗುರುವಾರವಷ್ಟೇ ಕಂಟೈನ್ಮೆಂಟ್ ವಲಯದಿಂದ ಬಂದ ಆರು ಜನರ ಹೆರಿಗೆಯಾಗಿದೆ. ಇವರಲ್ಲಿ ಮೂವರು ಮಾತ್ರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಕೊರೊನಾ ಪರೀಕ್ಷೆಗೆ ಒಳಗಾಗಲು ಗರ್ಭಿಣಿಯರು ಹಿಂಜರಿಕೆ ತೋರುತ್ತಿರುವುದೇ ಇದಕ್ಕೆ ಕಾರಣವಾಗಿದೆ.
ಡ್ರೈನೇಜ್ ಸಮಸ್ಯೆ : ಹೆರಿಗೆ ಆಸ್ಪತ್ರೆಯಲ್ಲಿ ಡ್ರೈನೇಜ್ ಸಮಸ್ಯೆ ಇದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಡ್ರೈನೇಜ್ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಹೊಸ ಬ್ಲಾಕ್ನಲ್ಲಿ ಹಲವಾರು ಕೋಣೆಗಳು ಬಹುತೇಕ ಸಿದ್ಧವಾಗಿದ್ದರೂ ಸಹ ಬಳಸಲು ಸಾಧ್ಯವಿಲ್ಲದಂತಾಗಿದೆ.
ಈ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಅಧೀಕ್ಷಕ ಡಾ. ಜೆ.ಬಿ. ನೀಲಕಂಠ, ಹೆರಿಗೆ ಆಸ್ಪತ್ರೆಯಲ್ಲಿ ಆರು ವೈದ್ಯರು ಹಾಗೂ 14 ಸ್ಟಾಫ್ ನರ್ಸ್ ಸೇರಿದಂತೆ ಪೂರ್ಣ ಸಿಬ್ಬಂದಿ ಇದೆ. ಸಿ.ಜಿ. ಆಸ್ಪತ್ರೆಯ ಹೆರಿಗೆ ವಿಭಾಗವನ್ನು ಇಲ್ಲಿಗೆ ವರ್ಗಾಯಿಸಿರುವುದರಿಂದ ಹೆಚ್ಚಿನ ಸಿಬ್ಬಂದಿಯ ಅಗತ್ಯವಿರುವ ಬಗ್ಗೆ ಜಿಲ್ಲಾ ಸರ್ಜನ್ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಹೆರಿಗೆಗಳ ಸಂಖ್ಯೆ ಇನ್ನು ಮುಂದೆ ಹೆಚ್ಚಾಗಲಿದೆ. ಅದಕ್ಕಾಗಿ ಆಸ್ಪತ್ರೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪ್ರಕರಣಗಳು ಬಂದರೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗೆ ಕಳಿಸಲೂ ಸಹ ಅವಕಾಶವಿದೆ ಎಂದು ಹೇಳಿದ್ದಾರೆ.