ಮೇಯರ್-ಜಿಲ್ಲಾಧಿಕಾರಿ ನಡುವೆ ಅನ್ಯೋನ್ಯತೆಯಿದೆ : ಶಿಂಧೆ

ದಾವಣಗೆರೆ, ಮೇ 20- ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲುಂಡಿರುವ ನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಹತಾಶರಾಗಿ ಮೇಯರ್ ಅಜಯ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡುತ್ತಾ, ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಆನಂದರಾವ್ ಶಿಂಧೆ ಆರೋಪಿಸಿದ್ದಾರೆ.

ಮೇಯರ್ ಮತ್ತು ಜಿಲ್ಲಾಧಿಕಾರಿಗಳು ಅನ್ಯೋನ್ಯವಾಗಿದ್ದು, ಇದನ್ನು ಸಹಿಸಲಾಗದೇ ದಿನೇಶ್ ಶೆಟ್ಟಿ ಈ ಇಬ್ಬರ ನಡುವೆ ವೈಮನಸ್ಸು ಮೂಡಿಸಲು ಮುಂದಾಗಿದ್ದಾರೆ.  ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನಿಂದ ಕಂಗೆಟ್ಟು ಮೇಯರ್ ಬಗ್ಗೆ ಹಗುರವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.

ಮೇಯರ್ ಜನರ ಪ್ರತಿನಿಧಿಯಾಗಿ ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ವೈಯಕ್ತಿಕವಾಗಿ ತಮ್ಮ ವಾರ್ಡ್‍ನಲ್ಲಿ ಹಲವಾರು ಜನರಿಗೆ ಸಾವಿರಾರು ಕಿಟ್‌ಗಳನ್ನು ನೀಡಿದ್ದಾರೆ. ಹೀಗಿದ್ದರೂ ಪದೇ ಪದೇ 17ನೇ ವಾರ್ಡಿನ ಜನರು ಚುನಾವಣೆಯಲ್ಲಿ ಬೆಳ್ಳಿ ಗಣಪತಿ, ಹಣ, ಮೊಬೈಲ್ ಪಡೆದು ಮತ ಚಲಾಯಿಸಿದ್ದಾರೆಂದು ಹೇಳಿಕೆ ನೀಡಿ ವಾರ್ಡಿನ ಮತದಾರರಿಗೆ ಅಪಮಾನ ಮಾಡಿದ್ದಾರೆ. ಕೇವಲ 17ನೇ ವಾರ್ಡ್‌ಗೆ ಸೀಮಿತರಾದ ದಿನೇಶ್ ಶೆಟ್ಟಿ ನಗರದ ಜನರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಅನುಕೂಲದ ದೃಷ್ಟಿಯಿಂದ ಜನರು ಪಡೆದ ಸಾಲ, ಎಲ್‌ಐಸಿ ಹಾಗೂ ಇನ್ನಿತರೆ ಕಂತುಗಳನ್ನು 3 ತಿಂಗಳವರೆಗೆ ವಿನಾಯಿತಿ ನೀಡಿದೆ. 

ಅದೇ ರೀತಿ ಸುಮಾರು 2 ತಿಂಗಳಿನಿಂದ ನಗರದ ವ್ಯಾಪಾರ-ವಹಿವಾಟುಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದಾರೆ. ಪಾಲಿಕೆ ಕಷ್ಟದಲ್ಲಿರುವವರ ಪರವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉತ್ತರ ಅಧ್ಯಕ್ಷ ಸಂಗನಗೌಡ್ರು, ನರೇಂದ್ರ ಕುಮಾರ್ ಇದ್ದರು.

error: Content is protected !!