ಜಿಲ್ಲಾ ಎಐಟಿಯುಸಿಯಿಂದ ಮೇ ದಿನಾಚರಣೆ

ದಾವಣಗೆೆರೆ, ಮೇ 4- ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಮೇ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರೆವೇರಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಕೊರೊನಾ ವಿರುದ್ಧ ಹೋರಾಡಲು ಕೇಂದ್ರಕ್ಕೆ ರಾಜ್ಯ ಸರ್ಕಾರಗಳಿಗೆ ನೀಡಲು ಹಣವಿಲ್ಲ. ಆದರೆ ದೇಶಕ್ಕೆ ಮೋಸ ಮಾಡಿರುವ ಬಂಡವಾಳಶಾಹಿಗಳಿಗೆ ಕೋಟಿ ಕೋಟಿ ಸಾಲವನ್ನು ವಜಾ ಮಾಡಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ದೇಶದಲ್ಲಿ ರೈತರು ಮತ್ತು ದುಡಿಯುವ ಸಂಘಟಿತ-ಅಸಂಘಟಿತ ಕಾರ್ಮಿಕರನ್ನು ಸರ್ಕಾರಗಳು ಎಲ್ಲಾ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ. ರೈತ, ಕಾರ್ಮಿಕರಿಗೆ, ಸಣ್ಣ ಕೈಗಾರಿಕೆಯವರಿಗೆ, ಮಧ್ಯಮವರ್ಗ ವ್ಯಾಪಾರಸ್ಥರಿಗೆ, ಉದ್ಯಮಗಳಿಗೆ, 68.607 ಕೋಟಿ ರೂಪಾಯಿಗಳ ಸಹಾಯ ಮಾಡಬೇಕಿತ್ತು. ಆದರೆ ಸರ್ಕಾರದ ನೀತಿ ಜನ ಸಾಮಾನ್ಯರ ವಿರುದ್ಧವಾಗಿರುತ್ತದೆ ಎಂದು ದೂರಿದರು.
ಪ್ರಪಂಚದ ರೈತ ಕಾರ್ಮಿಕರೆಲ್ಲ ಒಂದಾಗಿರಿ, ಬಲಪಂಥೀಯ ಜಾತಿ-ಧರ್ಮದವರು ಸಮಾಜದಲ್ಲಿ ಮಾಡುತ್ತಿರುವ ಅಶೇಷ್ಟತೆಯ ಹುನ್ನಾರವನ್ನು ಹುಟ್ಟುಹಾಕಿ, ವಿಷಬೀಜ ಬಿತ್ತಿ, ಸಮಾಜವನ್ನು ಕಾರ್ಮಿಕರನ್ನು ಒಡೆದಾಳುವ ಶಕ್ತಿಗಳನ್ನು ಬುಡ ಸಹಿತ ಕಿತ್ತು ಹಾಕಿ, ಬಸವಣ್ಣನವರು, ಕಾರ್ಲ್‌ಮಾರ್ಕ್ಸ್, ಡಾ.ಬಿ.ಆರ್. ಅಂಬೇಡ್ಕರ್ ಸಾರಿದಂತೆ ಸಮತಾ ಸಮಾಜ, ವರ್ಗರಹಿತ ಸಮಾಜವನ್ನು ಸ್ಥಾಪಿಸಲು ಅಣಿಯಾಗಬೇಕೆಂದು ಮೇ ದಿನಾಚರಣೆಯಂದು ಪಣ ತೊಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಂದರಾಜ್ ವಹಿಸಿದ್ದರು. ಅತಿಥಿಗಳಾಗಿ ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಎಂ.ಬಿ. ಶಾರದಮ್ಮ, ಡಿ.ಎಸ್. ನಾಗರಾಜ, ಸರೋಜಮ್ಮ ಇನ್ನಿತರರು ಭಾಗವಹಿಸಿದ್ದರು.

error: Content is protected !!