ದಾವಣಗೆರೆ, ಮೇ 4- ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸವನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಮಟ್ಟಕ್ಕೆ ಎತ್ತರಿಸಲು ಶ್ರಮಿಸಿದ ಸಾಹಿತಿ, ಕವಿ ಪ್ರೊ|| ಕೆ.ಎಸ್.ನಿಸಾರ್ ಅಹಮದ್ ವಿಶಿಷ್ಟ ವ್ಯಕ್ತಿತ್ವದ ಭ್ರಾತೃತ್ವದ ಶಕ್ತಿಯಾಗಿದ್ದರು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಪ್ರೊ. ನಿಸಾರ್ ಅಹಮದ್ ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ಮೌಲ್ಯಗಳನ್ನು ಭಿತ್ತರಿಸಿದ ಮಹಾನ್ ಕವಿ. ಹೀಗಾಗಿಯೇ ಅವರು ಸಾಹಿತ್ಯದ ಮೂಲಕ ಎಲ್ಲರ ಮನೆ, ಮನವನ್ನು ತಲುಪಲು ಸಾಧ್ಯವಾಗಿದೆ ಎಂದು ನುಡಿದರು.
ದಾವಣಗೆರೆ ಬಗ್ಗೆ ವಿಶೇಷ ಕಾಳಜಿ, ಅಭಿಮಾನ ಹೊಂದಿದ್ದ ನಿಸಾರ್ ಅವರು ಇಲ್ಲಿಯೂ ಕೆಲಸ ಮಾಡಿದ್ದರು. ಅಲ್ಲದೇ ಕರ್ನಾಟಕದ ಮಧ್ಯ ಭಾಗದಲ್ಲಿರುವ ದಾವಣಗೆರೆ ರಾಜ್ಯ ರಾಜಧಾನಿ ಆಗಬೇಕೆಂದು ಹಲವಾರು ಬಾರಿ ಪ್ರತಿಪಾದಿಸಿದ್ದೂ, ಅಲ್ಲದೇ, ಪಾಟೀಲ್ ಪುಟ್ಟಪ್ಪ ಅವರ ಹೋರಾಟವನ್ನೂ ಬೆಂಬಲಿಸಿದ್ದರು ಎಂದು ಸ್ಮರಿಸಿದರು.
ಕವಿ ಅಥವಾ ಸಾಹಿತಿ ತನ್ನ ಅಕ್ಷರದ ಬರವಣಿಗೆಯ ಮೂಲಕ ಮಾತ್ರ ದೊಡ್ಡವರಾಗುವುದಿಲ್ಲ. ಅದಕ್ಕೆ ವ್ಯಕ್ತಿತ್ವವೂ ಮುಖ್ಯವಾಗುತ್ತದೆ. ಸರಳ, ಸೌಮ್ಯ ಮತ್ತು ಸಹೃದಯದ ವ್ಯಕ್ತಿತ್ವ ಹೊಂದಿದ್ದ ನಿಸಾರ್ ಅಹ್ಮದ್ ಅವರು ಎಲ್ಲರಿಗೂ ಬೇಕಾಗಿ, ಎಲ್ಲರನ್ನೂ ಒಳಗೊಂಡ ಸಮತಾವಾದಿಯಾಗಿದ್ದರು. ಅವರ ಆದರ್ಶ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ. ಬಸವರಾಜ್ ಬಣಕಾರ, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಕಮ್ಮಾರ್, ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಶಿವಕುಮಾರ್ ಕಣಸೋಗಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಸತೀಶ್ ವಲ್ಲೇಪುರೆ, ಡಾ. ಜಯರಾಜ್ ಚಿಕ್ಕಪಾಟೀಲ, ಶೋಭಾ ನಾಯಕ, ನಂದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
December 23, 2024