ಕಾರ್ಮಿಕ ಕಾನೂನು ತಿದ್ದುಪಡಿ ಖಂಡಿಸಿ ಪ್ರತಿಭಟನೆ

ದಾವಣಗೆರೆ, ಮೇ 18- ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ) ಪದಾಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ನಗರದ ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಮಧ್ಯಪ್ರವೇ ಶಿಸಲು ಉಪವಿಭಾಗಾಧಿಕಾರಿಗಳ  ಮುಖಾಂ ತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಹಾಗೂ ಮಾಲೀಕರ ಲಾಬಿಯ ಒತ್ತಡಕ್ಕೆ ಮಣಿದು ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತರಲು ಮುಂದಾಗಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಸಂಪೂರ್ಣ ವೇತನವನ್ನು ಯಾವುದೇ ಕಡಿತವಿಲ್ಲದೇ ಲಾಕ್ ಡೌನ್ ಅವಧಿಗೆ ಪಾವತಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದ್ದರೂ ಮಾಲೀಕರು ಇದನ್ನು ನಿರಾಕರಿಸುತ್ತಿದ್ದಾರೆ. ಹಾಗಾಗಿ ಕಾನೂನು ಉಲ್ಲಂಘಿಸುವ ಮಾಲೀಕರ ವಿರುದ್ಧ ಕ್ರಮ ಜರುಗಿಸಿ, ಕಾರ್ಮಿಕರ ವೇತನ ಪಾವತಿಸಲು ರಾಜ್ಯ ಸರ್ಕಾರ  ಸೂಚಿಸಬೇಕು. ಉದ್ದೇಶಿತ ಕಾರ್ಮಿಕ ವಿರೋಧಿ ತಿದ್ದುಪಡಿ ಗಳನ್ನು ಕೈಬಿಟ್ಟು ಪುರೋಗಾಮಿ ಕಾರ್ಮಿಕ ಪರ ಸುಧಾರಣೆಗಳ ಜಾರಿಗೊಳಿಸಬೇಕು ಎಂಬುದೂ  ಸೇರಿದಂತೆ ಹಲವಾರು ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರುಗಳಾದ ಹೆಚ್.ಕೆ. ರಾಮಚಂದ್ರಪ್ಪ, ಕೆ.ಎಲ್. ಭಟ್, ಹೆಚ್.ಜಿ. ಉಮೇಶ್, ಮಂಜುನಾಥ್ ಕೈದಾಳೆ, ಆವರಗೆರೆ ವಾಸು, ಆವರಗೆರೆ ಚಂದ್ರು, ಐರಣಿ ಚಂದ್ರು, ಎಐಯುಟಿಯುಸಿಯ ಮಂಜುನಾಥ್ ಕುಕ್ಕವಾಡ, ಪರಶುರಾಮ್, ತಿಪ್ಪೇಸ್ವಾಮಿ, ಆನಂದ ರಾಜ್, ಗದಿಗೇಶ್ ಪಾಳೇದ್, ಜ್ಯೋತಿ ಲಕ್ಷ್ಮಿ, ವನಜಾಕ್ಷಿ, ಪದ್ಮಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!