ಮೇಯರ್ ಬಿ.ಜಿ.ಅಜಯ್‌ಕುಮಾರ್‌ಗೆ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಪ್ರಶ್ನೆ
____________________________________________________________________________________
ದಾವಣಗೆರೆ, ಮೇ 17- ಮೇಯರ್ ಅಧಿಕಾರ ಸಿಗುವಲ್ಲಿ ಜಿಲ್ಲಾಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದರೆ ತಪ್ಪಾಗಲಾರದು. ಅಧಿಕಾರ ಸಿಕ್ಕ ತಕ್ಷಣ ಜಿಲ್ಲಾಧಿಕಾರಿಗಳು ಮೇಯರ್ ಅವರಿಗೆ ಬೇಡವಾಗಿದ್ದಾರೆಯೇ ? ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಬಿ.ಜಿ. ಅಜಯ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬೆಳ್ಳಿ ಗಣಪತಿ, ಮೊಬೈಲ್ ಫೋನ್, ಹಣ ಹಂಚುವಾಗ ಕಾಂಗ್ರೆಸ್ ಪಕ್ಷ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಅಜಯ್‌ಕುಮಾರ್ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಗಂಭೀರ ಆರೋಪ ಮಾಡಿರುವ ಅವರು, ಮೇಯರ್ ಚುನಾವಣೆಯ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರುಗಳಿಗೆ ಮತದಾನದ ಹಕ್ಕು ನೀಡುವ ಮೂಲಕ ಅಜಯ್ ಕುಮಾರ್ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ದೂರಿದ್ದಾರೆ.
ಅಜಯ್‌ಕುಮಾರ್ ಅವರಿಗೆ ಇಷ್ಟು ದಿನ ಒಳ್ಳೆಯರಾಗಿದ್ದ ಜಿಲ್ಲಾಧಿಕಾರಿಗಳು ಇಂದು ಏಕೆ ಬೇಡವಾದರು ? ಎಂದು ಪ್ರಶ್ನಿಸಿರುವ ದಿನೇಶ್ ಶೆಟ್ಟಿ ಅವರು, ಅಜಯ್‌ಕುಮಾರ್ ಅವರು ತಾವು ಸಮರ್ಥ ಆಡಳಿತಗಾರರಲ್ಲ ಎಂಬುದನ್ನು ತೋರಿಸಿ ಕೊಟ್ಟಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಟ್ರೇಡ್ ಲೈಸೆನ್ಸ್ ಅಭಿಯಾನ ಮಾಡಿದ್ದ ಮೇಯರ್ ಅವರು ಇಂದು ಟ್ರೇಡ್ ಲೈಸೆನ್ಸ್ ಇಲ್ಲದೇ ಇದ್ದರೂ ವ್ಯವಹಾರ ನಡೆಸಬಹುದು ಎಂಬ ಹೊಸ ಕಾನೂನು ರೂಪಿಸಲು ಹೊರಟಿರುವುದನ್ನು ನೋಡಿದರೆ ಮಹಾನಗರ ಪಾಲಿಕೆಯನ್ನು ದಿವಾಳಿ ಹಂಚಿಗೆ ತಳ್ಳುವ ಎಲ್ಲಾ ಪ್ರಯತ್ನಗಳನ್ನು ಅಜಯ್ ಕುಮಾರ್ ಮಾಡಲು ಹೊರಟಂತಿದೆ.
ಈಗಾಗಲೇ ಕೊರೊನಾದಿಂದ ಲಾಕ್‌ಡೌನ್ ಆಗಿ ನಗರದ ಬಹುತೇಕ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದು, ನಾಗರಿಕರ ಸಂಕಷ್ಟವನ್ನು ದೂರ ಮಾಡಬೇಕಾದ ಜಿಲ್ಲಾಧಿಕಾರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಒಬ್ಬರನ್ನೊಬ್ಬರು ದೂರುತ್ತಾ, ಆಡಳಿತ ವೈಫಲ್ಯದಿಂದಾಗಿ ಜನತೆ ರೋಸಿ ಹೋಗುವಂತೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
January 23, 2025