ಮನೆ, ನಿವೇಶನ, ನೀರಿನ ಕಂದಾಯ ಕಟ್ಟಲು ಅವಕಾಶ ನೀಡಿ

ಮನೆ, ನಿವೇಶನ, ನೀರಿನ ಕಂದಾಯ ಕಟ್ಟಲು ಅವಕಾಶ ನೀಡಿ - Janathavaniಪಾಲಿಕೆ ನೌಕರರಿಗೆ ಸಂಬಳ ನೀಡಲು ಹಣವಿಲ್ಲ ಎಂಬ ಮೇಯರ್ ಹೇಳಿಕೆಗೆ ಎ. ನಾಗರಾಜ್ ಸಲಹೆ
ದಾವಣಗೆರೆ, ಮೇ 17- ಪಾಲಿಕೆ ನೌಕರರಿಗೆ ಸಂಬಳ ನೀಡಲು ಹಣವಿಲ್ಲ ಎಂಬ ಮೇಯರ್ ಹೇಳಿಕೆಗೆ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಸಲಹೆ ನೀಡಿದ್ದು ಮನೆ, ನಿವೇಶನ ಮತ್ತು ನೀರಿನ ಕರವನ್ನು ಕಟ್ಟಿಸಿಕೊಳ್ಳಲು ಮೇಯರ್ ಅವರು ಮುಂದಾಗಬೇಕೆಂದು ತಿಳಿಸಿದ್ದಾರೆ.
ಕಳೆದ 2 ತಿಂಗಳಿನಿಂದ ಲಾಕ್‍ಡೌನ್‍ನಿಂದಾಗಿ ಜನಸಾಮಾನ್ಯರು ಪಾಲಿಕೆಯಿಂದ ಯಾವುದೇ ಕೆಲಸ, ಕಾರ್ಯಗಳನ್ನು ಮಾಡಿಕೊಳ್ಳಲು ಆಗುತ್ತಿಲ್ಲ. ಈಗಾಗಲೇ ಸಬ್‌ರಿಜಿಸ್ಟ್ರಾರ್ ಕಛೇರಿ ಪ್ರಾರಂಭಗೊಂಡಿರುವುದರಿಂದ ಪಾಲಿಕೆಯಿಂದ ಎಕ್ಸ್‌ಟ್ರಾಕ್ಟ್‌ಗಾಗಿ ಸಾರ್ವಜನಿಕರು ಪರದಾಡುವಂತಾಗಿದ್ದು, ಪಾಲಿಕೆ ಯಿಂದ ಕೊರೊನಾ ನಿಯಂತ್ರಣದ ನಿಯಮದಡಿ ಕಂದಾಯ ಕಟ್ಟಿಸಿಕೊಳ್ಳಲು ಪಾಲಿಕೆ ಮುಂದಾಗಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಖಾತೆದಾರರು ಕಂದಾಯ ಕಟ್ಟಲು ತಯಾರಿದ್ದರೂ ಸಹ ಪಾಲಿಕೆ ಅವಕಾಶ ಮಾಡಿಕೊಡದೇ ಇರುವುದರಿಂದ ಖಾತೆದಾರರೇ ತೊಂದರೆ ಅನುಭವಿಸುತ್ತಿದ್ದು, ಇದನ್ನು ಪಾಲಿಕೆ ಆಡಳಿತ ಮನಗಂಡು ಪಾಲಿಕೆಗೆ ಆದಾಯದ ಮತ್ತು ಖಾತೆದಾರರ ಹಿತದೃಷ್ಟಿಯಿಂದ ಕಂದಾಯ ಕಟ್ಟಿಸಿಕೊಳ್ಳಬೇಕು ಜೊತೆಗೆ ಏಪ್ರಿಲ್ 30ರ ಒಳಗಾಗಿ ಕಂದಾಯ ಕಟ್ಟುವ ಖಾತೆದಾರರಿಗೆ ಶೇ.5ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿತ್ತು. ಲಾಕ್‌ಡೌನ್ ಪರಿಗಣನೆಗೆ ತೆಗೆದುಕೊಂಡು ಜೂನ್ 30ರವರೆಗೆ ಕಂದಾಯ ಕಟ್ಟುವ ಎಲ್ಲಾ ಖಾತೆದಾರರಿಗೆ ಶೇ.5 ರಷ್ಟು ರಿಯಾಯಿತಿಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿದ್ದಾರೆ.
ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಸಂಬಂಧಪಟ್ಟಂತೆ ವಿಪಕ್ಷ ಸದಸ್ಯರ ಮೌನವೇಕೆ ? ಎಂದು ಕೆಲವು ಪತ್ರಿಕೆಗಳಲ್ಲಿ ಬಂದಿದ್ದು, ಕಿಟ್ ವಿತರಣೆ ಅವಶ್ಯ ಎಂಬುದನ್ನು ಮನಗಂಡು ಎಲ್ಲಾ ಸದಸ್ಯರ ಒಪ್ಪಿಗೆ ಪಡೆದೇ ಕಿಟ್ ವಿತರಿಸಲಾಗಿದೆ. ಇದಕ್ಕಾಗಿ ಪಾಲಿಕೆಯ ವಿಶೇಷ ಸಭೆಯನ್ನೂ ಸಹ ಕರೆಯಲಾಗಿತ್ತು ಎಂದು ತಿಳಿಸಿರುವ ಅವರು ಪಾಲಿಕೆಯಿಂದ ನೀಡಲಾದ ಆಹಾರ ಧಾನ್ಯಗಳ ಕಿಟ್‍ಗಳಿಂದ  ನಗರದಲ್ಲಿ ದಿನನಿತ್ಯ ದುಡಿದು ಜೀವನ ಸಾಗಿಸುವ ಸುಮಾರು 30 ಸಾವಿರ ಕುಟುಂಬಗಳಿಗೆ ಅನುಕೂಲವಾಗಿದೆ. ಪಾಲಿಕೆ ಬಡವರ ಹಸಿವು ನೀಗಿಸುವ ಕೆಲಸವನ್ನು ಮಾಡಿದೆ ಎಂದು ಅಭಿಮತ ವ್ಯಕ್ತಪಡಿಸಿ, ಪಾಲಿಕೆ ನೀಡಿದ 500 ಕಿಟ್‌ಗಳ ಜೊತೆಗೆ ಆಯಾ ವಾರ್ಡ್‍ಗಳಲ್ಲಿ ಸದಸ್ಯರುಗಳು ತಮ್ಮ ಶಕ್ತ್ಯಾನುಸಾರ ಕಿಟ್‍ಗಳನ್ನು ವಿತರಿಸಿದ್ದಾರೆ ಎಂದು ವಿವರಿಸಿದ್ದಾರೆ.

error: Content is protected !!