ದಾವಣಗೆರೆ, ಮೇ 17- ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಅಣ್ಣ – ತಮ್ಮಂದಿರಂತೆ ಭಾವೈಕ್ಯತೆಯಿಂದ ಜೀವನ ಸಾಗಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಶಾಂತಿ – ಸೌಹಾರ್ದತೆ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಕಿವಿಗೊಡದೇ ಜಾಗೃತರಾಗಿ ರಬೇಕು. ಎಲ್ಲರೂ ಒಂದಾಗಿ ಜೀವನ ಸಾಗಿಸೋಣ ಎಂದು ಮಹಾನಗರ ಪಾಲಿಕೆ ಮಹಾಪೌರ
ಬಿ.ಜಿ. ಅಜಯಕುಮಾರ್ ಆಶಯ ವ್ಯಕ್ತಪಡಿಸಿದರು.
ನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್ ಆಗಿ ದಾವಣಗೆರೆಯಲ್ಲಿ ವ್ಯಾಪಾರ-ವಹಿವಾಟುಗಳು ಸ್ತಬ್ದವಾಗಿ 55 ದಿನಗಳಾಗಿವೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಗಲಿರುಳು ಶ್ರಮಿಸುತ್ತಿರುವಾಗ ಜನರೂ ಸಹ ಸ್ಪಂದಿಸಿ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.
ಕೊರೊನಾ ಮುಕ್ತ ದಾವಣಗೆರೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ಸಂದರ್ಭದಲ್ಲಿ 4-5 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಂದಿರುವ, ಮುಸ್ಲಿಮರು ಬಟ್ಟೆ ಖರೀದಿ ಮಾಡುವುದು ಬೇಡ ಎಂಬ ವಿಷಯವು ಜನರಲ್ಲಿ ಗೊಂದಲವನ್ನುಂಟು ಮಾಡಿದೆ. 1991-92ರಲ್ಲಿ ದಾವಣ ಗೆರೆಯಲ್ಲಿ ಧರ್ಮ – ಧರ್ಮದ ವಿರುದ್ದ ಕೆಲವೊಂದು ಭಾಗದಲ್ಲಿ ಗಲಭೆಗಳಾಗಿ ಕೆಲ ಸಮಯ ದಾವ ಣಗೆರೆ ಬಂದ್ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಎಲ್ಲರೂ ಅಣ್ಣ-ತಮ್ಮಂದಿರಂತೆ ಜೀವನ ಸಾಗಿಸುತ್ತಿ ದ್ದೇವೆ. ಹೀಗಿರುವಾಗ ಅಪಪ್ರಚಾರ ಮಾಡಿ ಜಾತಿ – ಜಾತಿಗಳ ಮಧ್ಯೆ ತೊಡಕನ್ನು ತಂದಿಡುವ, ಶಾಂತಿ ಕದಡುವ ಕೆಲಸವನ್ನು ಯಾರೂ ಸಹ ಮಾಡಬಾರದು ಎಂದು ಮೇಯರ್ ಮನವಿ ಮಾಡಿದರು.
ಕ್ರೈಸ್ತರು ಗುಡ್‍ಫ್ರೈಡೆ, ಹಿಂದೂ ಗಳು ಯುಗಾದಿ ಹಬ್ಬವನ್ನು, ಜೈನರು ಮಹಾವೀರ ಜಯಂತಿಯನ್ನು ಮನೆಯಲ್ಲಿಯೇ ಆಚರಣೆ ಮಾಡಿ ದ್ದಾರೆ. ಕೇಂದ್ರದ ಆದೇಶವನ್ನು ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು, ಸಿಖ್ಖರು ಎಲ್ಲಾ ಧರ್ಮೀಯರು ಪಾಲಿಸುತ್ತಾ ಕಾನೂ ನಿಗೆ ಗೌರವ ಕೊಟ್ಟಿದ್ದಾರೆ. ಯಾರೂ ಶಾಂತಿ ಕದಡುವ ಕೆಲಸವನ್ನು ಮಾಡಬಾರದು. ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರು ಒಂದೇ ಎನ್ನುವ ಭಾವನೆಯನ್ನು ನಾವೆಲ್ಲರು ಹೊಂದಬೇಕು. ಶಾಂತಿ ಸೌಹಾರ್ದತೆ ಕದಡುವ ಕಿಡಿಗೆಡಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಕೆ.ಚಮನ್‌ಸಾಬ್ ಮಾತನಾಡಿ, ಕೆಲವರು ಅನಾವಶ್ಯಕ ಹೇಳಿಕೆಗಳ ನೀಡುತ್ತಿದ್ದು, ಅದಕ್ಕೂ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಕಿಡಿಗೇಡಿಗಳ ಕೆಲಸಕ್ಕೆ ಆಸ್ಪದ ಕೊಡುವುದು ಬೇಡ. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯ ಸಯ್ಯದ್ ಚಾರ್ಲಿ ಮಾತನಾಡಿ, ಜಮಾತ್‌ನಲ್ಲಿ ಹೊಸ ಬಟ್ಟೆ ಖರೀದಿಸಬೇಡಿ. ಆ ಹಣವನ್ನೇ ಬಡವರಿಗೆ ವಿನಿಯೋಗಿಸುವಂತೆ ಮುಖಂಡರು ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಬೇರೆ ಇಲ್ಲ. ವಿಡಿಯೋ ಮಾಡಿದವನಿಗೆ ಮುಖಂಡರು ಮುಂದೆ ಹೀಗೆ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಮಾಜದ ಮುಖಂಡ ಜೆ. ಅಮಾನುಲ್ಲಾ ಖಾನ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
January 25, 2025