ಕೊರೊನಾ ನಿಯಂತ್ರಣಕ್ಕೆ ಡಿಸಿ ಬಳಿ 20 ಕೋಟಿ ಹಣವಿದ್ದರೂ ಹರಿಹರ ತಾಲ್ಲೂಕಿಗೆ ಒಂದು ನಯಾ ಪೈಸೆ ಹಣವಿಲ್ಲ

ಕೊರೊನಾ ನಿಯಂತ್ರಣಕ್ಕೆ ಡಿಸಿ ಬಳಿ 20 ಕೋಟಿ ಹಣವಿದ್ದರೂ ಹರಿಹರ ತಾಲ್ಲೂಕಿಗೆ ಒಂದು ನಯಾ ಪೈಸೆ ಹಣವಿಲ್ಲ - Janathavaniಕಿಡಿ ಕಾರಿದ ಶಾಸಕ ಎಸ್. ರಾಮಪ್ಪ

ಹರಿಹರ, ಮೇ 16- ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಮ್ಮ ಬಳಿ ಸರ್ಕಾರದ 20 ಕೋಟಿ ರೂ. ಹಣ ಇರುವುದರಿಂದ ಅದನ್ನು ಕೊರೊನಾ ಸೋಂಕು ನಿಯಂತ್ರಣ ಮಾಡಲು ಬಳಸಲಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಆ ಹಣದಲ್ಲಿ ಹರಿಹರ ತಾಲ್ಲೂಕಿಗೆ 1100 ಕಿಟ್ ಬಿಟ್ಟರೆ ಇದುವರೆಗೆ ಒಂದು ನಯಾ ಪೈಸೆ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ. ಆ ಹಣವನ್ನು ಯಾವುದಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸ ಬೇಕು ಎಂದು ಶಾಸಕ ಎಸ್.ರಾಮಪ್ಪ ಕಿಡಿ ಕಾರಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು, ಮಾತನಾಡಿದರು. ಕೊರೊನಾ ಸೋಂಕು ಸಮಸ್ಯೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ಸರ್ಕಾರಕ್ಕೆ ಹಣವನ್ನು ಬಿಡುಗಡೆ ಮಾಡುವಂತೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಸಹ ಇದುವರೆಗೂ ಒಂದು ರೂಪಾಯಿಯನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಸಭೆ ಮಾಡಿದಾಗ ಅವರನ್ನು ಕೇಳಿಕೊಂಡರೂ ಸಹ ಇದುವರೆಗೂ ಹಣವನ್ನು ಬಿಡುಗಡೆ ಮಾಡದೆ ಸುಳ್ಳು ಹೇಳಿಕೊಂಡು ಹೊರಟಿದ್ದಾರೆ. ಹಣವನ್ನು ಬಿಡುಗಡೆ ಮಾಡಿ ಎಂದು ಸಚಿವರು, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಪೌರಾಯುಕ್ತರನ್ನು ಯಾರನ್ನು ಕೇಳಿದರೂ ಸಹ ಅವರ ಮೇಲೆ ಇವರು, ಇವರ ಮೇಲೆ ಅವರು ಪ್ರತಿದಿನ ಸುಳ್ಳು ಹೇಳಿಕೊಂಡು ಹೊರಟಿದ್ದು, ಇದರಲ್ಲಿ ಯಾರಾದರೂ ಒಬ್ಬರು ಮುಂದೆ ಬಂದು ಸಾರ್ವಜನಿಕರ ಮುಂದೆ ಸತ್ಯ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು   ಎಂದರು.
ನಾನು ನನ್ನ ಅನುದಾನದಲ್ಲಿ 3 ಲಕ್ಷ ರೂ. ಮಾಸ್ಕ್‌ ಮತ್ತು 2 ಲಕ್ಷ ರೂ. ಸ್ಯಾನಿಟೈಸರ್ ಖರೀದಿ ಮಾಡಿ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿದ್ದು ಮತ್ತು ನನ್ನ ಸ್ವಂತ ಹಣದಿಂದ ಹಾಗೂ ಕೆಲವು ಸದಸ್ಯರ ಹಣದಿಂದ ತಾಲ್ಲೂಕಿನ ಜನತೆಗೆ ಸಾವಿರಾರು ಆಹಾರದ ಕಿಟ್ ಗಳನ್ನು ವಿತರಣೆ  ಮಾಡಲಾಗುತ್ತದೆಯೇ ವಿನಃ ಸರ್ಕಾರದ ವತಿಯಿಂದ ಒಂದು ರೂಪಾಯ ಬಿಡುಗಡೆ ಆಗದೇ ಇರುವುದು ದೊಡ್ಡ ದುರಂತ ಎಂದು ಹೇಳಿದರು.
ಕೇಂದ್ರ ಸರ್ಕಾರ  ಕಾರ್ಮಿಕರ ಕಾಯ್ದೆಗಳಿಗೆ ಕೆಲವು ತಿದ್ದುಪಡಿಗಳನ್ನು ತಂದಿದ್ದನ್ನು ರಾಜ್ಯ ಸರ್ಕಾರವೂ ಸಹ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲು ತಿರ್ಮಾನಿಸಿರುವುದು ಕಾರ್ಮಿಕರಿಗೆ ಮಾರಕವಾಗಿದೆ. ರಾಜ್ಯ ಸರ್ಕಾರದ ಈ ಕ್ರಮವು ಉದ್ಯಮಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿದ್ದುಪಡಿ ತರಲು ಹೊರಟಿತ್ತೇ ಹೊರತು, ಕಾರ್ಮಿಕರ ಹಿತ ಕಾಪಾಡಲು ಹಾಗೂ ಅವರಿಗೆ ಪೂರಕವಾದ ಕಾನೂನನ್ನು ತರಲು ವಿಫಲವಾಗಿದೆ. ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಮಾಡುತ್ತಿರುವುದರಿಂದ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಇದು ಸರಿಯಾದ ಕ್ರಮವಲ್ಲ. ಇದರಿಂದ ಮುಂಬರುವ ದಿನಗಳಲ್ಲಿ ಕಾರ್ಮಿಕರ ಸಂಖ್ಯೆಯನ್ನು ಕಡಿತ ಮಾಡುವ ಹುನ್ನಾರವನ್ನು ಮಾಡಲಾಗುತ್ತಿದೆ. 100 ಕ್ಕಿಂತ ಹೆಚ್ಚಿನ ಕಾರ್ಮಿಕರಿರುವ ಕಾರ್ಖಾನೆಗಳನ್ನು ಯಾವಾಗ ಬೇಕಾದರೂ ಮುಚ್ಚಲು ಅವಕಾಶವನ್ನು ಕೊಡುವುದರಿಂದ ಕಾರ್ಮಿಕರು ಬೀದಿ ಪಾಲಾಗುತ್ತಾರೆ. ಕಾರ್ಮಿಕರು ಕೆಲಸದಿಂದ ವಜಾ ಆದಲ್ಲಿ, ಕೋರ್ಟ್ ಮೆಟ್ಟಿಲೇರಿದರೆ ವೇತನ ನೀಡಬೇಕೆಂಬ ಕಾನೂನು ರದ್ದು ಪಡಿಸುತ್ತಿರುವುದು ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶ ಹೆಚ್ಚಾಗಿ ಕಂಡುಬರುತ್ತದೆ.
ಕಾರ್ಮಿಕರಿಗಿದ್ದ 44 ಕಾನೂನುಗಳನ್ನು ರದ್ದುಪಡಿಸಿ, ಕೇವಲ 4 ಸೀಮಿತಗೊಳಿಸಿರುವುದು ನೋಡಿದರೆ, ಸರ್ಕಾರ ಕಾರ್ಮಿಕರ ಸಂಪೂರ್ಣ ಹಕ್ಕನ್ನು ಕಸಿದುಕೊಳ್ಳುತ್ತದೆ. ಕಾರ್ಮಿಕರಿಗೆ ವೇತನ ಪಾವತಿಯಾಗದಿದ್ದರೆ ಊಟ, ವಸತಿ ಸಂಬಂಧ ಕಾನೂನು ಉಲ್ಲಂಘನೆಯಾದರೆ ಯಾವುದೇ ಕ್ರಮ ಇಲ್ಲ ಎಂದು ತಿದ್ದುಪಡಿ ತರುವುದು ಸರಿಯಾದ ಕ್ರಮವಲ್ಲ. ಇದರಿಂದಾಗಿ ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಎಸ್.ಬಿ.ವಿಜಯಕುಮಾರ್, ಕಾಳಿ ಪ್ರಸಾದ್ ಮತ್ತು ಇತರರು ಹಾಜರಿದ್ದರು. 

error: Content is protected !!