ಮುಂಗಾರು ಬಿತ್ತನೆಗೆ ಸಿದ್ದತೆ; ಬೀಜ, ರಸಗೊಬ್ಬರ ದಾಸ್ತಾನು

ಜಗಳೂರು, ಮೇ 15- ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಗೆ ಬೇಕಾಗುವ ಅಗತ್ಯ ಬೀಜ, ರಸಗೊಬ್ಬರವನ್ನು ಕೃಷಿ ಇಲಾಖೆ ದಾಸ್ತಾನು ಮಾಡಲಾಗಿದ್ದು, ಮುಂಗಾರು ಹಂಗಾಮಿಗೆ ಸುಮಾರು 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.  

ತಾಲ್ಲೂಕಿನಲ್ಲಿ 585 ಎಂ.ಎಂ ವಾಡಿಕೆ ಮಳೆಯಾಗಬೇಕು. ಕಳೆದ 2019ನೇ ಸಾಲಿನಲ್ಲಿ 721 ಎಂ.ಎಂ ಮಳೆಯಾಗಿತ್ತು. ಈ ಬಾರಿ ಇಲ್ಲಿಯವರೆಗೂ 28.5 ಎಂ.ಎಂ ಮಳೆಯಾಗಬೇಕಿತ್ತು, ಆದರೆ 33 ಎಂ.ಎಂ ಮಳೆಯಾಗಿದೆ. ಮುಸುಕಿನ ಜೋಳ 31 ಸಾವಿರ ಹೆಕ್ಟೇರ್, ಶೇಂಗಾ 5 ಸಾವಿರ ಹೆಕ್ಟೇರ್, ಹತ್ತಿ 1,500 ಹೆಕ್ಟೇರ್, ರಾಗಿ  3 ಸಾವಿರ ಹೆಕ್ಟೇರ್ ಸೇರಿದಂತೆ ಒಟ್ಟು 51 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ.  

ಮುಸುಕಿನ ಜೋಳ, ಸಜ್ಜೆ, ಸೂರ್ಯಕಾಂತಿ,  ಜೋಳ, ತೊಗರಿ, ರಾಗಿ, ಹತ್ತಿ, ಶೇಂಗಾ, ನವಣೆ, ಸಿರಿಧಾನ್ಯಗಳು ಸೇರಿದಂತೆ ಒಟ್ಟು 12,707 ಕ್ವಿಂಟಾಲ್ ಬಿತ್ತನೆ ಬೀಜ ಬೇಕಾಗುತ್ತದೆ. ಅದರ ದಾಸ್ತಾನು ಮಾಡುವ ಕಾರ್ಯ ಭರದಿಂದ ಸಾಗಿದೆ. 

ತಾಲ್ಲೂಕಿನ ರೈತರು ಬಿತ್ತನೆ ಮಾಡುವಾಗ ಹೆಚ್ಚಾಗಿ ಡಿಎಪಿ ರಾಸಾಯನಿಕ ಗೊಬ್ಬರ ಹಾಕುತ್ತಾರೆ. ಅದರ ಜತೆಯಲ್ಲಿ ಪೊಟ್ಯಾಶ್ ಗೊಬ್ಬರ ಕಡ್ಡಾಯವಾಗಿ ಹಾಕಲು ಸೂಚನೆ ನೀಡಲಾಗಿದೆ. ಮುಂಗಾರಿಗೆ  2,172 ಟನ್  ಗೊಬ್ಬರ ಬೇಕಾಗುತ್ತದೆ. 970 ಟನ್ ಎಲ್ಲಾ ಅಂಗಡಿಗಳಲ್ಲಿ ದಾಸ್ತಾನು ಮಾಡಲಾಗಿದೆ. ಯೂರಿಯಾ ಮೇಲ್ಗೊಬ್ಬರವಾಗಿ 4,300 ಟನ್ ಬೇಕಾಗುತ್ತದೆ. ಇದರಲ್ಲಿ 1,200 ಟನ್ ಇದೆ. ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ 6 ಸಾವಿರ ಟನ್ ಬೇಕಾಗಿದ್ದು, ಈಗ 600 ಟನ್ ಸಂಗ್ರಹಿಸಿಡಲಾಗಿದೆ.     

ಯಾವ ಬೀಜಕ್ಕೆ ಎಷ್ಟೆಷ್ಟು ಸಹಾಯ ಧನ : ಶೇಂಗಾ 1 ಕೆ.ಜಿಗೆ  ಸಾಮಾನ್ಯ ವರ್ಗಕ್ಕೆ 15 ರೂ, ಎಸ್ಸಿ/ಎಸ್ಟಿ  22.50 ರೂ, ಹೈಬ್ರೀಡ್‌ ಮುಸುಕಿನ ಜೋಳ ಸಾಮಾನ್ಯ 20ರೂ, ಎಸ್ಸಿ/ಎಸ್ಟಿ 30ರೂ, ತೊಗರಿ ಸಾಮಾನ್ಯ 25ರೂ, ಎಸ್ಸಿ/ಎಸ್ಟಿ  37.50ರೂ ಸರ್ಕಾರದಿಂದ  ಸಹಾಯ ಧನ ನೀಡಲಾಗುತ್ತದೆ. ಉಳಿದ ಹಣವನ್ನು ರೈತರು ತುಂಬಬೇಕಾಗುತ್ತದೆ.  

ಪ್ರತಿ ವರ್ಷವೂ ಬೆಳೆ ಪರಿವರ್ತನೆ ಮಾಡಬೇಕು. ಹತ್ತಾರು ವರ್ಷಗಳಿಂದ  ಒಂದೇ ಬೆಳೆ ಬೆಳೆಯುವುದರಿಂದ  ಫಲವತ್ತತೆ ಕಳೆದುಕೊಳ್ಳುತ್ತದೆ.ಹಾಗಾಗಿ ಹಿಂದೆ  ಮೆಕ್ಕೆಜೋಳ ಹಾಕಿದ್ದರೆ ಈ ಸಲ ರಾಗಿ, ಹತ್ತಿ ಇತರೆ ಬೆಳೆಗಳನ್ನು ಬೆಳೆಯುವುದು ಸೂಕ್ತವಾಗಿದೆ. ದೃಢೀಕೃತವಲ್ಲದ  ಬಿತ್ತನೆ ಬೀಜವನ್ನು ರೈತರು ಖರೀದಿ ಮಾಡಬಾರದು. ಇತರೆ ಯಾವುದೇ ಪ್ರದೇಶಗಳಿಂದ  ತರಬಾರದು. ಪ್ರತಿಯೊಬ್ಬರು ಕೃಷಿ ಇಲಾಖೆ ಸಹಾಯದಲ್ಲಿ ಇಲ್ಲವೇ ಗೊಬ್ಬರದ ಅಂಗಡಿಯಲ್ಲಿ ಖರೀದಿಸಿದರೆ ಒಳ್ಳೆಯದು. ಬೀಜ ಖರೀದಿ ಮಾಡಿದ ತಕ್ಷಣವೇ ಬ್ಯಾಚ್, ಲಾಟ್ ನಂಬರ್ ಮತ್ತು ರಶೀದಿಯನ್ನು ಪಡೆಯಬೇಕು. ಎಂಆರ್‍ಪಿಗಿಂತ ಹೆಚ್ಚಿನ ಬೆಲೆಯಲ್ಲಿ ಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಲೋಕೇಶ್ ತಿಳಿಸಿದ್ದಾರೆ. 

error: Content is protected !!