ದಾವಣಗೆರೆ, ಮೇ 7- ಜಿಲ್ಲೆಯ ಕೊನೆ ಭಾಗಕ್ಕೆ ಹಾಗೂ ತೋಟಗಾರಿಕೆಗೆ ನೀರು ಅವಶ್ಯಕತೆಯಿದ್ದು, ಭದ್ರಾದಿಂದ ಇನ್ನೂ 15 ದಿನ ಹೆಚ್ಚುವರಿಯಾಗಿ ನೀರು ಹರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಕಾಡಾ ಸಮಿತಿಗೆ ಒತ್ತಾಯಿಸಿದ್ದಾರೆ.
ಭದ್ರಾ ನಾಲೆಗೆ ನಿಗದಿತ ವೇಳಾಪಟ್ಟಿಯಂತೆ ಕಾಲುವೆಗಳಿಗೆ ನೀರು ಹರಿಸಿದ್ದರೂ ಕೂಡ ಅಚ್ಚುಕಟ್ಟು ಪ್ರದೇಶದ ಕೊನೇ ಭಾಗದ ರೈತರಿಗೆ ನೀರು ಸಿಕ್ಕಿಲ್ಲ. ಇದೀಗ ಭತ್ತ ಕೊಯ್ಲಿಗೆ ಬಂದಿದ್ದು, ಕಡೇ ಭಾಗದ ರೈತರು ತಡವಾಗಿ ಭತ್ತ ನಾಟಿ ಮಾಡಿದ ಕಾರಣ ಇನ್ನೂ 15 ದಿನ ಹೆಚ್ಚುವರಿಯಾಗಿ ನೀರು ಹರಿಸುವಂತೆ ಆಗ್ರಹಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನಲ್ಲಿ ಅಡಿಕೆ ಬೆಳೆಗಾರರು ಹೆಚ್ಚಾಗಿ ಇದ್ದು, ತೋಟಗಳಿಗೆ ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರು ಹರಿಸಬೇಕಿದೆ. ಸಾವಿರ ಅಡಿಗಳಷ್ಟು ಬೋರ್‌ವೆಲ್ ಕೊರೆಸಿ ಅಡಿಕೆ ತೋಟ ಮಾಡಿದ್ದಾರೆ.
ಅಂತರ್ಜಲ ಮಟ್ಟ ಕುಸಿದು ರೈತರ ತೋಟಗಳು ಒಣಗಿ ಹೋಗುವ ಸ್ಥಿತಿಗೆ ಬಂದಿವೆ. ಕಾಡಾ ಸಮಿತಿ ಈ ಕುರಿತು ಗಮನ ಹರಿಸಬೇಕಿದೆ ಎಂದರು.
ಅಧಿಕಾರ ಇಲ್ಲದ ವೇಳೆಯೂ ಕಾಂಗ್ರೆಸ್ ಜನಸೇವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೋರಾಟದ ಪ್ರತಿಫಲದಿಂದ ಬಡ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣ ದರ ಇಲ್ಲದೆ ಊರು ಸೇರುವಂತಾಗಿದೆ.
ಸರ್ಕಾರಕ್ಕೆ ಒಂದು ಕೋಟಿ ರೂಪಾಯಿ ನೀಡುತ್ತೇವೆ, ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸಿ ಎಂದು ಹೇಳಿದ ಪರಿಣಾಮ ಕಾರ್ಮಿಕರು ತಮ್ಮ ಊರು ತಲುಪಿದರು.
ಕಾಂಗ್ರೆಸ್ ಪಕ್ಷಕ್ಕೆ ಜನಸೇವೆ, ಬಡವರ ಪರ ಕೆಲಸ ಮಾಡಲು ಅಧಿಕಾರ ಬೇಕಿಲ್ಲ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೋರಿಸಿದ್ದಾರೆ ಎಂದು ಶಿವಗಂಗಾ ಹೇಳಿದ್ದಾರೆ.
December 23, 2024