ದಾವಣಗೆರೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್

ಅಜ್ಮೀರ್ ಹೋಗಿ ಬಂದವನಲ್ಲಿ ಸೋಂಕು

ದಾವಣಗೆರೆ,  ಮೇ 10- ಇಂದು ದಾವಣಗೆರೆ ಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು 20 ವರ್ಷದ ಯುವಕ ರೋಗಿ ಸಂಖ್ಯೆ 847 ಆಗಿದ್ದಾನೆ.  ಈ ಸೋಂಕಿತನ ಮನೆಯು ಶಿವನಗರದಲ್ಲಿ ಇದ್ದು ಮನೆಯನ್ನು ಎಪಿಸೆಂಟರ್ ಎಂದು ಗುರುತಿಸಿ ಇಲ್ಲಿ ನಿಯಮಾನುಸಾರ ಹೊಸ ಕಂಟೈನ್‍ಮೆಂಟ್ ಝೋನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ರೋಗಿ ಅಜ್ಮೀರ್‍ಗೆ ಹೋಗಿರುವ ಪ್ರವಾಸ ಇತಿಹಾಸ ಹೊಂದಿರುವುದಾಗಿ ಹೇಳಿದರು.
ಮಾರ್ಚ್ 20ರಂದು ದಾವಣಗೆರೆಯಿಂದ 16 ಜನರ ಜೊತೆ ಹೊರಟ ಈ ರೋಗಿಯು 21ಕ್ಕೆ ಅಜ್ಮೀರ್ ತಲುಪುತ್ತಾರೆ.  ಅಲ್ಲಿ ಬಾಡಿಗೆ ಮನೆಯಲ್ಲಿ ತಂಗಿರುತ್ತಾರೆ. ನಂತರ ಮೇ 1ಕ್ಕೆ  ಅಜ್ಮೀರ್ ನಿಂದ ಹೊರಟು, 3ರಂದು ದಾವಣಗೆರೆಗೆ ಬಂದಿರುತ್ತಾರೆ.
ದಾವಣಗೆರೆಗೆ ಬಂದಾಕ್ಷಣ ಈ 16 ಜನರನ್ನು ನರಹರಿ ಶೇಟ್  ಕಲ್ಯಾಣ ಮಂಟಪದಲ್ಲಿ ಇನ್‌ಸ್ಟಿ ಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಿದಾಗ 15 ಜನರ ಮಾದರಿ ನೆಗೆಟಿವ್ ಎಂದು ಫಲಿತಾಂಶ ಬಂದಿತ್ತು. ಇವರನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಇಂದು ಪಾಸಿಟಿವ್ ಬಂದಿರುವ ರೋಗಿಯ ಮಾದರಿಯನ್ನು ಮೇ 5 ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದೀಗ ಮನೆಗೆ ಕಳುಹಿಸಿದ್ದವರನ್ನು ಮತ್ತೆ ಕ್ವಾರೆಂಟೈನ್‌ ನಲ್ಲಿಡಲಾಗಿದೆ. ಜೊತೆಗೆ  ದ್ವಿತೀಯ ಸಂಪರ್ಕದಲ್ಲಿ ಇದೀಗ 18 ಜನರನ್ನು ಟ್ರೇಸ್ ಮಾಡಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದ್ದು, ಇವರೆಲ್ಲರನ್ನೂ ಕ್ವಾರಂಟೈನ್ ಮಾಡಿ ಪರೀ ಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಇಂದು 199 ವರದಿಗಳು ನೆಗೆಟಿವ್ ಬಂದಿದ್ದು, 201 ವರದಿಗಳು ಬಾಕಿ ಇವೆ. ಇಂದು ಹೊಸದಾಗಿ 164 ಜನರ ಗಂಟಲು ದ್ರವ ಮಾದರಿ ಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕಳೆದ ಎರಡು ಮೂರು ದಿನಗಳಿಂದ ವಾಟ್ಸಾಪ್‍ನಲ್ಲಿ ಜಿಲ್ಲಾಸ್ಪತ್ರೆ ಮತ್ತು  ಜಿಲ್ಲಾಸರ್ಜನ್ನರ ಕುರಿತು ಆಕ್ಷೇಪಣಾರ್ಹವಾಗಿ ಮಾತನಾಡಲಾದ ಆಡಿಯೋ ಕ್ಲಿಪ್ ಹರಿದಾಡುತ್ತಿದೆ. ಇದು ಸುಳ್ಳು ಮತ್ತು ತಪ್ಪು ಮಾಹಿತಿಯಾಗಿದೆ. ಆಸ್ಪತ್ರೆಯಲ್ಲಿ ಡಿಎಸ್ ಸೇರಿದಂತೆ ವೈದ್ಯರು ಹಾಗೂ ಎಲ್ಲ ಸಿಬ್ಬಂದಿ ತಮ್ಮ ಕುಟುಂಬದಿಂದ ದೂರ ಇದ್ದು ಹಗಲಿರುಳೂ ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದು ಸರಳ ವಿಚಾರವಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅವರನ್ನು ಹುರುದುಂಬಿ ಸುವ ಬದಲು ಈ ರೀತಿ ದುರುದ್ದೇಶದಿಂದ ಬೇಜವಾಬ್ದಾರಿಯಾಗಿ ಸುಳ್ಳು ಮತ್ತು ತಪ್ಪು ಮಾಹಿತಿ ಹರಿದಾಡಿಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಸ್ಪತ್ರೆ ಮತ್ತು ಡಿಎಸ್ ಬಗ್ಗೆ ಈ ರೀತಿ ತಪ್ಪು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಗಿರೀಶ್ ದೇವರಮನಿ ಎಂಬುವವರನ್ನು ದಸ್ತಗಿರಿ ಮಾಡಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತ್ತೊಂದು ಆಡಿಯೋ ಕ್ಲಿಪ್ ಇತ್ತೀಚೆಗೆ ಹರಿದಾಡುತ್ತಿದ್ದು, ದಾವಣಗೆರೆಯಲ್ಲಿ ನೂರಾರು ಪ್ರಕರಣಗಳು, ಸ್ಮಶಾನವಾಗುತ್ತಿರುವ ದಾವಣಗೆರೆ ಹೀಗೆ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಇಂಜಿನಿಯರ್ ವಿನಯ್ ಮತ್ತು ಆತನ ಸಹಪಾಠಿ ಸಂತೋಷ್ ಕಠಾರಿಯಾ ಇವರ ವಿರುದ್ದವೂ ವಿದ್ಯಾನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನರು ಈ ರೀತಿಯ ಗಾಳಿ, ತಪ್ಪು ಸುದ್ದಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆ. ಸಾರ್ವಜನಿಕರು ತಮ್ಮ ಪಾತ್ರ ಅಂದರೆ ಮನೆಯಲ್ಲೇ ಇದ್ದು, ಹೊರಗೆ ಅಕಸ್ಮಾತ್ ಬಂದಲ್ಲಿ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು. ಸರ್ಕಾರ ಅನೇಕ ಸೂಚನೆ, ಸುತ್ತೋಲೆ, ಆಪ್ತಮಿತ್ರ, ಸೇವಾ ಸಿಂಧು ಇ-ಪಾಸ್ ಈ ರೀತಿಯ ಸೌಲಭ್ಯಗಳನ್ನು ನೀಡಿದ್ದು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆದರೆ ತಪ್ಪು ಸುದ್ದಿಗಳಿಗೆ ಕಿವಿಗೊಡಬಾರದು. ಈ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ದ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದರು.
ದಾವಣಗೆರೆಯಿಂದ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳಿಗೆ ಗ್ರಾಮೀಣ ಭಾಗದಲ್ಲಿ ಜನರು ತೊಂದರೆ ಕೊಡಬಾರದು. ದಾರಿಗೆ ಅಡ್ಡ ಮಣ್ಣು, ಬೇಲಿ ಹಾಕುವುದು ಮಾಡಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಇದ್ದರು.

error: Content is protected !!