ಹಕ್ಕಿಜ್ವರ ಸೋಂಕು ತಗುಲಿದ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶ

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

ದಾವಣಗೆರೆ, ಮಾ.17- ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ 157 ಕುಟುಂಬಗಳಲ್ಲಿ 1167 ನಾಟಿ ಕೋಳಿಗಳು ಹಾಗೂ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಂಬಾರಕೊಪ್ಪಲು ಗ್ರಾಮದಲ್ಲಿ ರುವ ಮಾಂಸದ ಕೋಳಿ ಫಾರ್ಮ್ (ಅಶ್ವಿನಿ ಕೋಳಿ ಫಾರಂ)ನಲ್ಲಿರುವ ಸುಮಾರು 455 ಮಾಂಸದ ಕೋಳಿಗಳನ್ನು ಮತ್ತು 4500 ಹಿತ್ತಲ ಕೋಳಿಗಳನ್ನು ಇಂದು ವೈಜ್ಞಾನಿಕ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ನಾಶ ಮಾಡಲಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಬನ್ನಿಕೋಡು ಹಾಗೂ ಕುಂಬಾರಕೊಪ್ಪಲು ಗ್ರಾಮಗಳಿಂದ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಹೆಬ್ಬಾಳ, ಬೆಂಗಳೂರಿಗೆ ವಿಶ್ಲೇಷಣೆಗೆ ಸಲ್ಲಿಸಲಾದ ಮಾದರಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ಹೆಚ್ಚಿನ ತಪಾಸಣೆಗಾಗಿ ನಿಯಮದಂತೆ ಭೂಪಾಲದ ನಿಹ್ಷಾದ್ (NIHSAD) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಸಹ ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರದ ವೈರಾಣು ಹೆಚ್5ಎನ್1 ಸೋಂಕು ಇರುವುದು ದೃಢಪಟ್ಟಿರುತ್ತದೆ. ಇದರ ಪ್ರಯುಕ್ತ ಕೇಂದ್ರ ಸರ್ಕಾರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ಅಧಿಕೃತವಾಗಿ ಆದೇಶವನ್ನೂ ಸಹ ನೀಡಿದೆ.
ರೋಗಪೀಡಿತ ವಲಯ ಘೋಷಣೆ : ಕೇಂದ್ರ ಸರ್ಕಾರದ ಕೋಳಿ ಶೀತ ಜ್ವರ ನಿಯಂತ್ರಣ ಮತ್ತು ತಡೆಗಟ್ಟುವ ಮಾರ್ಗಸೂಚಿಗಳ ಅನ್ವಯ ರೋಗೋದ್ರೇಕ ಕಾಣಿಸಿಕೊಂಡಿರುವ ಬನ್ನಿಕೋಡು ಗ್ರಾಮ ಹಾಗೂ ಕುಂಬಾರಕೊಪ್ಪಲು ಗ್ರಾಮಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಹಾಗೂ 1 ರಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.

ವೈಜ್ಞಾನಿಕವಾಗಿ 2 ಮೀಟರ್ ಉದ್ದ, ಅಗಲ ಹಾಗೂ 2 ಮೀ ಆಳದ ಗುಂಡಿ ತೆಗೆದು ಕೋಳಿಗಳನ್ನು ಹೂಳಲಾಗುತ್ತದೆ. ಈ ಸಂದರ್ಭದಲ್ಲಿ ಸುಣ್ಣ ಮತ್ತು ಮಣ್ಣನ್ನು ಪದರುಗಳಲ್ಲಿ ಹಾಕಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ನಾಶ ಮಾಡ ಲಾದ ಸ್ಥಳದಲ್ಲಿ 3 ತಿಂಗಳ ಕಾಲ ನಿರ್ಧರಿತ ಸೋಂಕಿದ್ದು ಪ್ರದೇಶದಲ್ಲಿ ಯಾವುದೇ ಕುಕ್ಕುಟ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸೋಂಕಿತ ಪ್ರದೇಶದಲ್ಲಿ 3 ತಿಂಗಳವರೆಗೆ ಸರ್ವೇಕ್ಷಣಾ ಕಾರ್ಯ ನಡೆಯಲಿದೆ.
ಪರಿಹಾರ : ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸೋಂಕು ಹಿನ್ನೆಲೆಯಲ್ಲಿ ನಾಶಗೊಳಿಸಿದ ಕೋಳಿಗಳಿಗೆ ಪರಿಹಾರ ಸಹ ನೀಡಲಾಗುತ್ತದೆ. 8 ವಾರದ ಒಳಗಿನ ಮೊಟ್ಟೆ ನೀಡುವ ಪ್ರತಿ ಕೋಳಿಗೆ ರೂ.20 ಹಾಗೂ 8 ವಾರ ಮೇಲ್ಪಟ್ಟ ಕೋಳಿಗೆ ರೂ.90 ನೀಡಲಾಗುವುದು. ಅದರಂತೆ ಮಾಂಸದ ಕೋಳಿಗಳಿಗೆ 6 ವಾರದ ಒಳಗಿನವುಗಳಿಗೆ ರೂ.20 ಹಾಗೂ 6 ವಾರ ಮೇಲ್ಪಟ್ಟ ಮಾಂಸದ ಕೋಳಿಗೆ ರೂ.70 ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸೋಂಕು ತಗುಲಿದ ವ್ಯಾಪ್ತಿಯಲ್ಲಿ ಲಭ್ಯವಿರುವ ಮೊಟ್ಟೆಗಳನ್ನೂ ಸಹ ನಾಶ ಮಾಡಲು ಕ್ರಮ ವಹಿಸಲಾಗುತ್ತಿದೆ. ಪ್ರತಿ ಮೊಟ್ಟೆಗೆ ರೂ.3 ರಂತೆ ಕುಕ್ಕುಟ ಆಹಾರಕ್ಕೆ ಪ್ರತಿ 1 ಕೆ.ಜಿ.ಗೆ ರೂ.12 ರಂತೆ ಪರಿಹಾರ ನೀಡಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

error: Content is protected !!