ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿ

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿ - Janathavaniದಾವಣಗೆರೆ, ಮೇ 14- ಕೇಂದ್ರದ ಬಿಜೆಪಿ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗುತ್ತಿದೆ. ಅನ್ನದಾತರಿಗೆ ಅನ್ಯಾಯವಾಗುವಂತಹ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ಅಧ್ಯಕ್ಷ ಶಿವಗಂಗಾ ವಿ.ಬಸವರಾಜು ಕಿಡಿಕಾರಿದ್ದಾರೆ.

ಸದ್ಯದ ಎಪಿಎಂಸಿ ನೀತಿ ಬದಲಾವಣೆ ಮಾಡಿದರೆ ವರ್ತಕರು ಮತ್ತು ರೈತರ ಸಂಬಂಧದ ಕೊಂಡಿ ಕಳಚಿದಂತಾಗುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ವರ್ತಕರಿಗೆ ಮಾರಾಟ ಮಾಡಿ ವ್ಯವಹಾರ ಮಾಡುತ್ತಿದ್ದರು.

ಇದರಿಂದ ರೈತರು ನೇರವಾಗಿ ವರ್ತಕರ ಸಂಪರ್ಕದಿಂದ ಬೆಳೆ ಮಾರಾಟವಾಗುತ್ತಿತ್ತು. ಇದರಿಂದ ರೈತರಿಗೆ ಸ್ಥಳೀಯ ವರ್ತಕರು ನೇರ ಸಂಪರ್ಕ ಹೊಂದುತ್ತಿದ್ದರು. ಎಪಿಎಂಸಿ ಕಾಯ್ದೆ ಬದಲಾವಣೆ ಮಾಡಿದರೆ ರೈತರು ಮತ್ತು ವರ್ತಕರ ನಡುವೆ ಸಂಬಂಧ ಕಳಚುತ್ತದೆ. ರೈತರು ತಮ್ಮ ಬೆಳೆ ಬಗ್ಗೆ ನೇರವಾಗಿ ಯಾರನ್ನೂ ಕೇಳದಂತಹ ಪರಿಸ್ಥಿತಿ ಉಂಟಾಗುತ್ತದೆ.

ವಿಶ್ವದ ಯಾವುದೇ ಕಂಪನಿ ನೇರವಾಗಿ ರೈತನಿಂದ ಉತ್ಪನ್ನ ಖರೀದಿ ಮಾಡಬಹುದೆಂದು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಇದರಿಂದ ಮೊದಲು ರೈತರಿಗೆ ಸ್ವಲ್ಪ ಹಣ ಹೆಚ್ಚಿನದಾಗಿ ಸಿಗಬಹುದು. ಮುಂದಿನ ದಿನಗಳಲ್ಲಿ ರೈತರಿಗೆ ಅನ್ಯಾಯವಾದರೆ, ನೇರವಾಗಿ ಕಂಪನಿ ಸಂಪರ್ಕಕ್ಕೆ ಸಿಗುತ್ತಾರಾ? ಎಂಬ ಪ್ರಶ್ನೆ ಉಂಟಾಗುತ್ತಿದೆ.


ದೊಡ್ಡ ದೊಡ್ಡ ಕಂಪನಿ ಗಳು ರೈತರಿಗೆ ಯಾವುದೇ ಷರತ್ತು ಇಲ್ಲದೆ ಉತ್ಪನ್ನ ಖರೀ ದಿಸಲು ಸಾಧ್ಯವಿಲ್ಲ. ಕಂಪನಿ ಗಳಿಗೆ ಗುಣಮಟ್ಟದ ಉತ್ಪನ್ನಗ ಳನ್ನು ಮಾತ್ರ ಮಾರಾಟ ಮಾಡಬೇಕಾಗುತ್ತದೆ. ರೈತರು ಬೆಳೆದ ಎಲ್ಲಾ ಉತ್ಪನ್ನಗಳನ್ನು ಕಂಪನಿಗಳೇ ನೇರವಾಗಿ ಖರೀದಿಸಲು ಸಾಧ್ಯವಿಲ್ಲ. ಇಂತಹ ಗೊಂದಲಗಳ ನಡುವೆ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಸರಿಯಲ್ಲ.

ಇಂತಹ ಅವೈಜ್ಞಾನಿಕ ನೀತಿಗಳಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ, ಸರ್ಕಾರವೇ ನೇರವಾಗಿ ಖರೀದಿಸಿ, ಕಂಪನಿಗಳಿಗೆ ಕೆಂಪು ಹಾಸಿಗೆ ಹಾಕುವ ಬದಲು ಇರುವಂತಹ ಎಪಿಎಂಸಿಯನ್ನು ಅಭಿವೃದ್ಧಿ ಮಾಡಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು.

ತರಕಾರಿ, ಹಣ್ಣು ಮತ್ತು ಹೂ ಬೆಳೆಗಳ ಸಂರಕ್ಷಣೆ ಮತ್ತು ಸರಬರಾಜು ಮಾಡಲು ಪ್ರತಿಯೊಂದು ಎಪಿಎಂಸಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಿ. ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡಲಿ ಎಂದು ಶಿವಗಂಗಾ ಬಸವರಾಜು ಒತ್ತಾಯಿಸಿದ್ದಾರೆ.

error: Content is protected !!