
ದಾವಣಗೆರೆ, ಮೇ 13- ಕೊರೊನಾ ವೈರಸ್ ಸಂಕಷ್ಟ ಹಾಗೂ ಲಾಕ್ಡೌನ್ ಹೊಡತಕ್ಕೆ ತತ್ತರಿಸಿರುವ ಭಾರತದ ಆರ್ಥಿಕ ವ್ಯವಸ್ಥೆ ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಸ್ವಾವಲಂಬನೆಗಾಗಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿರುವುದು ಪೊಳ್ಳು ಘೋಷಣೆಯಾಗಿದ್ದು, ಇದರಿಂದ ಭಾರತದ ಆರ್ಥಿಕ ಪುನಶ್ಚೇತನದ ನಿರೀಕ್ಷೆ ಹುಸಿಯಾಗಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.
20 ಲಕ್ಷ ಕೋಟಿ ಪ್ಯಾಕೇಜ್ ಘೊಷಣೆಯು ಈ ಹಿಂದೆ 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬ ನಾಗರಿಕನಿಗೂ 15 ಲಕ್ಷ ತುಂಬುವುದಾಗಿ ಘೋಷಿಸಿದ್ದರು.
ಮೋದಿಯವರ ಹೊಸ ಪ್ಯಾಕೇಜ್ ಸಹ ಅದೇ ರೀತಿ ಇದೆ. ನಮ್ಮ ದೇಶದ ಹಣಕಾಸಿನ ಇತಿಮಿತಿಯನ್ನು ನೋಡಿ ಭರವಸೆ ನೀಡಬೇಕಾಗಿದ್ದ ಪ್ರಧಾನ ಮಂತ್ರಿಗಳು ಹಳಿ ಇಲ್ಲದೆ ರೈಲು ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಕೊರೊನಾ ವೈರಸ್ ಸಂಕಷ್ಟದಿಂದ ಕಂಗೆಟ್ಟಿರುವ ದೇಶದ ಜನರಿಗೆ ಆಸೆ ಹುಟ್ಟಿಸಿ ಅರಗಿನ ಅರಮನೆ ಕಟ್ಟಲು ಹೊರಟಿದ್ದಾರೆಂದು ಅವರು ಲೇವಡಿ ಮಾಡಿದ್ದಾರೆ.
2019-20ರ ಭಾರತದ ಬಜೆಟ್ ಗಾತ್ರದ ಮೊತ್ತ 27,86,349 ಲಕ್ಷ ಕೋಟಿಯಾಗಿತ್ತು. ಬಜೆಟ್ಟಿನ ನಿಗದಿತ ಯೋಜನೆ ವೆಚ್ಚದಲ್ಲಿ ಶೇ. 30ರಷ್ಟು ಕಳೆದ ಸಾಲಿನಲ್ಲಿ ಕಡಿತಗೊಳಿಸಿದ್ದ ಉದಾಹರಣೆ ನಮ್ಮ ಮುಂದೆ ಇದೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಅನ್ನು 2020ರ ಫೆಬ್ರವರಿ 1 ರಂದು ಮಂಡಿಸಲಾಗಿದ್ದು, ಒಟ್ಟಾರೆ ಬಜೆಟ್ ಗಾತ್ರ 30,42,230 ಲಕ್ಷ ಕೋಟಿ ಎಂದು ತಿಳಿಸಲಾಗಿತ್ತು.
ದೇಶದ ಒಟ್ಟಾರೆ ವಾರ್ಷಿಕ ಆದಾಯ 20 ಲಕ್ಷ ಕೋಟಿ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ 50 ದಿನಗಳಿಂದ ನಿರೀಕ್ಷಿತ ಆದಾಯ ಕೈಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಇದೀಗ ದೇಶದ ಸ್ವಾವಲಂಬನೆಗೆ ರೂ. 20 ಲಕ್ಷ ಕೋಟಿ ಪ್ಯಾಕೇಜ್ ಎಂದು ಹೇಳಿರುವುದು ತಳಬುಡವಿಲ್ಲದ ಯೋಜನೆಯಾಗಿದೆ ಎಂದು ಅವರು ದೂರಿದ್ದಾರೆ.