ದಾವಣಗೆರೆ, ಮೇ 4- ಜಿಲ್ಲೆಯ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿದ ಆಹಾರ ಧಾನ್ಯಗಳ ಕಿಟ್ಗಳನ್ನು ಜಿಲ್ಲೆಯ ಸಂಸದ ಸಿದ್ದೇಶ್ವರ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಬಡವರಿಗೆ ಹಂಚಿ, ತಾವು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದ್ದಾರೆ.
ಪಾಲಿಕೆಗೆ ಆಯ್ಕೆಯಾದ ಯಶೋಧ ಉಮೇಶ್ ಹಿಂದೆಯೇ ರಾಜೀನಾಮೆ ನೀಡಿದ್ದು, ಈಗ ನಗರ ಪಾಲಿಕೆಯಿಂದ ನೀಡುತ್ತಿರುವ ಕಿಟ್ಗಳನ್ನು ತಂದು ಸರ್ಕಾರದ ಹಣದಲ್ಲಿ ಬಿಜೆಪಿಯ ಸಂಸದ ಸಿದ್ದೇಶ್ವರ ಅವರ ವಾರ್ಡ್ ನಲ್ಲಿ ವಿತರಿಸಿ, ಅದನ್ನು ನಾವು ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಬಿಟ್ಟಿ ಪ್ರಚಾರ ಪಡೆದು ಕೊಳ್ಳುತ್ತಿದ್ದಾರೆ ಎಂದು ದಿನೇಶ್ ದೂರಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಅವರು 10 ಸಾವಿರ ಕಿಟ್ಗಳನ್ನು ಜನರಿಗೆ ಹಂಚಿದ್ದಾರೆ. ಆದರೆ, ಸಿದ್ದೇಶ್ವರ ಮತ್ತು ರೇಣುಕಾಚಾರ್ಯ ಅವರುಗಳು ತಮ್ಮ ದುಡ್ಡಲ್ಲಿ ಇದುವರೆಗೂ ಬಿಡಿಗಾಸನ್ನು ಹಂಚಿಲ್ಲ. ಆದರೆ ಬಿಟ್ಟಿ ಪ್ರಚಾರಕ್ಕೆ ಮುಂದೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಚಾರಕ್ಕೆ ಮುಂದಾಗಿರುವುದು ಎಷ್ಟು ಸರಿ? ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಇದ್ದು, ಕೊರೊನಾ ಟೆಸ್ಟ್ ಕಿಟ್ಗಳನ್ನು ತರಿಸಿಕೊಡಿ ಬಾಪೂಜಿ ಆಸ್ಪತ್ರೆಯಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸೋಣ ಎಂದು ಹೇಳಿದ್ದರೂ ಇದುವರೆಗೂ ಕಿಟ್ ತರಿಸಿಕೊಟ್ಟಿಲ್ಲ ಎಂದು ದಿನೇಶ್ ಶೆಟ್ಟಿ ದೂರಿದ್ದಾರೆ.