ಜಿಲ್ಲೆಯಲ್ಲಿ ಲಾಕ್ ಡೌನ್ ಲೆಕ್ಕಕ್ಕಿಲ್ಲ ನಿಯಮ ಮೀರುವುದರಲ್ಲಿ ನಗರವೇ ಮೇಲುಗೈ

Home ಸುದ್ದಿ ಸಂಗ್ರಹ ಜಿಲ್ಲೆಯಲ್ಲಿ ಲಾಕ್ ಡೌನ್ ಲೆಕ್ಕಕ್ಕಿಲ್ಲ ನಿಯಮ ಮೀರುವುದರಲ್ಲಿ ನಗರವೇ ಮೇಲುಗೈ

ಜಿಲ್ಲೆಯಲ್ಲಿ ಲಾಕ್ ಡೌನ್ ಲೆಕ್ಕಕ್ಕಿಲ್ಲ ನಿಯಮ ಮೀರುವುದರಲ್ಲಿ ನಗರವೇ ಮೇಲುಗೈ

ದಾವಣಗೆರೆ, ಏ.16- ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಲ್ಲಿ ದ್ದರೂ ಸಹ ನಗರ ಸೇರಿದಂತೆ ಜಿಲ್ಲೆಯ ಕೆಲ ಜನರಿಗೆ ಮಾತ್ರ ಇದು ಲೆಕ್ಕಕ್ಕಿಲ್ಲದಂತಾಗಿದೆ. ಅನಾವಶ್ಯಕವಾಗಿ ಮನೆಯಿಂದ ಹೊರ ಬರಬಾರದೆಂಬ ನಿಯಮವಿದ್ದರೂ ಸಹ ಮೀರಿ ರಸ್ತೆಗಿಳಿಯುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ.
ಪ್ರತಿ ದಿನವೂ ಸಹ ಅನಾವಶ್ಯಕವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡಿ, ದಂಡ ವಿಧಿಸಲಾಗುತ್ತಿದೆ. ಹೀಗಿದ್ದರೂ ಸಹ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ರಸ್ತೆಗಳಲ್ಲಿ ಸಂಚರಿಸುವ ಪ್ರಯತ್ನ ಮಾಡಿದರೂ ಸಹ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಪೊಲೀಸರ ಕೈಗೆ ಸಿಕ್ಕು ತಪ್ಪಿಸಿಕೊಳ್ಳಲು ನಾನಾ ಕಸರತ್ತು ನಡೆಸಿದರೂ ತಮ್ಮ ವಾಹನಗಳನ್ನು ಒಪ್ಪಿಸಿ ದಂಡ ಕಟ್ಟಲಾಗುತ್ತಿದೆ.
ಆದರೂ ಸಹ ಮುಖ್ಯವಾಗಿ ನಗರದಲ್ಲಿ ಲಾಕ್‌ಡೌನ್ ಆದೇಶ ಮೀರಿ ರಸ್ತೆಗಿಳಿಯುವವರ ಸಂಖ್ಯೆ ಹೆಚ್ಚಾಗಿರುವುದಕ್ಕೆ ಲಾಕ್‌ಡೌನ್ ನಿಂದ ಇಲ್ಲಿನವರೆಗೂ ವಾಹನಗಳ ಸೀಜ್ ಸಂಖ್ಯೆಯೇ ಸಾಕ್ಷಿಯಾಗಿದೆ.
ಲಾಕ್ ಡೌನ್  ತೆರವಿಗೆ ಏಪ್ರಿಲ್ 14 ಅನ್ನೇ ಕಾಯುತ್ತಾ ಸುಮ್ಮನಿದ್ದ ಜನರು ಏಪ್ರಿಲ್ 13ರಿಂದಲೇ ರಸ್ತೆಗಿಳಿಯುವುದು ಹೆಚ್ಚಾಗುತ್ತಿದೆ. ಏಪ್ರಿಲ್ 14ರ ನಂತರವಂತೂ ವಾಹನಗಳ ಹಾಗೂ ಜನ ಸಂಚಾರ ಏರ ತೊಡಗಿದೆ.
ಚೆಕ್‍ಪೋಸ್ಟ್, ಸೀಲ್‍ಡೌನ್, ರಸ್ತೆಗಳ ಬಂದ್, ದ್ರೋಣ್ ಕ್ಯಾಮರಾ ಮುಖೇನ ಹದ್ದಿನ ಕಣ್ಣು, ಪ್ರಮುಖ ರಸ್ತೆಗಳಲ್ಲಿ ಪೊಲೀ ಸರು ಕಾದು ಕುಳಿತಿದ್ದರೂ, ಕಠಿಣ ಕ್ರಮ ವಹಿಸಿ ದ್ದರೂ ಸಹ ಜನ ಸಂಚಾರ ಮಾತ್ರ ನಿಂತಿಲ್ಲ. ಸದಾ ಒಂದಿಲ್ಲೊಂದು ಕಾರಣಗಳಿಗಾಗಿ ನಿತ್ಯ ಜನರು ಸಂಚರಿಸುತ್ತಲೇ ಇದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ನಿತ್ಯ ನೂರಾರು ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರೂ ಸಹ ಜನರು ಲೆಕ್ಕಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡಬೇಕು ಹಾಗೂ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ ಎನ್ನುವ ಪೋಲಿಸರ ಜಾಗೃತಿಗೆ ಕಿವಿಗೊಡುತ್ತಿಲ್ಲ. ದಿನಸಿ, ಔಷಧಕ್ಕಾಗಿ ಎಂಬ ನೆಪಗಳನ್ನು ಹೇಳುತ್ತಾ ಜನ ಬೀದಿಗೆ ಬರುತ್ತಿದ್ದಾರೆ. ಬ್ಯಾಂಕ್‍ಗಳಲ್ಲಿ, ಔಷಧಿ ಅಂಗಡಿಗಳಲ್ಲಿ ಜನರ ದಟ್ಟಣೆ ಹೆಚ್ಚಾಗಿದೆ. ಜನ ಮಾರುಕಟ್ಟೆಗೆ ಬರುವುದು ನಿಂತಿಲ್ಲ.
3,563 ವಾಹನಗಳ ವಶ: ಲಾಕ್‍ಡೌನ್ ಜಾರಿಯಾದ ಬಳಿಕ ಮಾರ್ಚ್ 26ರಿಂದ ಇಂದಿನವರೆಗೂ ಜಿಲ್ಲೆಯಲ್ಲಿ ಒಟ್ಟು 3563 ವಾಹನಗಳನ್ನು ವಶಪಡಿಸಿಕೊಂಡು ಐಎಂವಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 3,354 ದ್ವಿಚಕ್ರ ವಾಹನಗಳು, 68 ಆಟೋಗಳು, 119 ಕಾರುಗಳು, 6 ಲಾರಿಗಳು, 16 ಇತರೆ ವಾಹನಗಳಾಗಿವೆ. ಕೇವಲ 22 ದಿನಗಳಲ್ಲಿ ಸುಮಾರು 24 ಲಕ್ಷದ 42 ಸಾವಿರದ 100 ರೂ. ದಂಡ ವಿಧಿಸಲಾಗಿದೆ.
ನಗರದಲ್ಲೇ ಒಟ್ಟು 2081 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪೈಕಿ 1960 ದ್ವಿಚಕ್ರ ವಾಹನಗಳು, 58 ಆಟೋಗಳು, 58 ಕಾರುಗಳು, 5 ಇತರೆ ವಾಹನಗಳು. 17 ಲಕ್ಷದ 2 ಸಾವಿರದ 600 ದಂಡ ವಿಧಿಸಲಾಗಿದೆ. ದಾವಣಗೆರೆ ಗ್ರಾಮಾಂತರದಲ್ಲಿ ಒಟ್ಟು 394 ವಾಹನಗಳನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ 338 ದ್ವಿಚಕ್ರ ವಾಹನಗಳು, 3 ಆಟೋಗಳು, 46 ಕಾರುಗಳು, 4 ಲಾರಿಗಳು, 3 ಇತರೆ ವಾಹನಗಳು. 1 ಲಕ್ಷದ 97 ಸಾವಿರದ 500 ರೂ. ದಂಡ ವಿಧಿಸಲಾಗಿದೆ.
ಹರಪನಹಳ್ಳಿ ವ್ಯಾಪ್ತಿಯಲ್ಲಿ ಒಟ್ಟು 381 ವಾಹನಗಳನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ 353 ದ್ವಿಚಕ್ರ ವಾಹನಗಳು, 7 ಆಟೋಗಳು, 11 ಕಾರುಗಳು, 2 ಲಾರಿಗಳು, 8 ಇತರೆ ವಾಹನ ಗಳು. 1 ಲಕ್ಷದ 81 ಸಾವಿರ ರೂ. ದಂಡ ವಿಧಿಸ ಲಾಗಿದೆ. ಚನ್ನಗಿರಿ ವ್ಯಾಪ್ತಿಯಲ್ಲಿ ಒಟ್ಟು 707 ವಾಹನಗಳನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ 703 ದ್ವಿಚಕ್ರ ವಾಹನಗಳು, 4 ಕಾರುಗಳಾಗಿವೆ. 3 ಲಕ್ಷದ 61 ಸಾವಿರ ರೂ. ದಂಡ ವಿಧಿಸಲಾಗಿದೆ.


ಜಿ.ಎಸ್. ವಸಂತಕುಮಾರ್
9738584961
[email protected]

error: Content is protected !!