ಬಾಲ್ಯ ವಿವಾಹ ಉದಾಸೀನ ಸಲ್ಲ: ಎಸ್ಪಿ ರಿಷ್ಯಂತ್‌

ದಾವಣಗೆರೆ, ಡಿ. 24 – ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಹಾಗೂ ಬಾಲ್ಯ ವಿವಾಹ ತಡೆಯಲು ಪೊಲೀಸ್ ಇಲಾಖೆ ಸೇರಿದಂತೆ, ಎಲ್ಲ ಇಲಾಖೆಗಳು ಜೊತೆಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸುಧಾರಣಾ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಕಡಿಮೆ. ಕಳೆದ ವರ್ಷ ಎರಡು ಪ್ರಕರಣಗಳು ಮಾತ್ರ ನಡೆದಿದ್ದವು. ಆದರೆ, ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಬಾಲ್ಯ ವಿವಾಹ ತಪ್ಪು ಎಂದು ಪೋಷಕರು ಹಾಗೂ ಸಮಾಜದವರು ಭಾವಿಸುವುದಿಲ್ಲ ಎಂದವರು ವಿಷಾದಿಸಿದರು.

ಮದುವೆಯ ನಂತರ ಗರ್ಭಿಣಿಯಾಗಿ ವೈದ್ಯರ ಬಳಿ ಬಂದಾಗಲೇ ಅಪ್ರಾಪ್ತೆಯ ವಿವಾಹವಾಗಿರುವುದು ಗೊತ್ತಾಗುತ್ತದೆ. ಅಲ್ಲಿಯವರೆಗೆ ಊರಿನವರ ಎದುರೇ ಮದುವೆ ನಡೆದಿದ್ದರೂ, ಸಾರ್ವಜನಿಕರು ಉದಾಸೀನತೆ ತೋರಿ, ಆ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸರ ಬಳಿ ವರದಿ ಮಾಡುವುದಿಲ್ಲ. ಈ ಪರಿಸ್ಥಿತಿ ಬದಲಾಗಬೇಕು ಎಂದವರು ಹೇಳಿದರು.

ಬಾಲ್ಯ ವಿವಾಹಕ್ಕೆ ಹತ್ತು ವರ್ಷಗಳವರೆಗಿನ ಜೈಲು ಶಿಕ್ಷೆ ಇದೆ. ಬಾಲ್ಯ ವಿವಾಹ ಮಾಡಿ ಶಿಕ್ಷೆಗೆ ಗುರಿಯಾದವರ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕು. ಅದು ಉಳಿದವರಿಗೂ ಎಚ್ಚರಿಕೆಯಾಗುತ್ತದೆ ಎಂದು ರಿಷ್ಯಂತ್ ಅಭಿಪ್ರಾಯ ಪಟ್ಟರು.

ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಎಲ್ಲ ಮಕ್ಕಳಿಗೂ ಓದುವ ಅವಕಾಶ ಸಿಗಬೇಕು. ಬಾಲ ಕಾರ್ಮಿಕ ಪದ್ಧತಿ ತಪ್ಪಿಸಲು ಆಪರೇಷನ್ ಮುಸ್ಕಾನ್ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದವರು ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲೆಯಲ್ಲಿ ಆಗಾಗ ಅನೈತಿಕ ಸಾಗಾಣಿಕೆ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಪ್ರಕರಣಗಳನ್ನು ಸಂಪೂರ್ಣ ನಿಲ್ಲಿಸಲು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ, ಉತ್ತರ ಕರ್ನಾಟಕದಲ್ಲಿ ಸಾಮಾಜಿಕ – ಆರ್ಥಿಕ ಕಾರಣದಿಂದಾಗಿ ಅನೈತಿಕ ಸಾಗಾಣಿಕೆ ನಡೆಯುತ್ತಿದೆ. ಇಂತಹ ಘಟನೆಗಳು ನಡೆಯುವುದು ತೀರಾ ಕಡಿಮೆ. ಅಪರೂಪಕ್ಕೆ ನಡೆಯುವ ಪ್ರಕರಣಗಳನ್ನೂ ತಡೆಯಲು ಮುಂದಾಗಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಯುನಿಸೆಫ್‌ನ ಕೆ. ರಾಘವೇಂದ್ರ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!