2018ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಜೋಡಿ: ನ್ಯಾಯಾಧೀಶರಿಂದ ಮನವೊಲಿಕೆ
ದಾವಣಗೆರೆ, ಡಿ.23- ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ರಾಜಿ ಪಂಚಾಯ್ತಿ ಮೂಲಕ ತಿಳಿವಳಿಕೆ ನೀಡಿ ಒಂದು ಮಾಡಿದ ಘಟನೆ ನಗರದ ನ್ಯಾಯಾಲಯದಲ್ಲಿ ನಡೆದಿದೆ.
ತಾಲ್ಲೂಕಿನ ಲೋಕಿಕೆರೆ ಗ್ರಾಮದ ಎಸ್.ಎಂ. ರಮೇಶ್ ಹಾಗೂ ಅದೇ ಗ್ರಾಮದ ಯಲ್ಲಮ್ಮ ನಗರದ ಯುವತಿ ಕೆ.ಹೊನ್ನಮ್ಮ 2013ರಲ್ಲಿ ವಿವಾಹವಾಗಿ ದಾಂಪತ್ಯ ಜೀವನದಲ್ಲಿ ಹೊಂದಾ ಣಿಕೆ ಬಂದಿಲ್ಲದ ಕಾರಣ ಬೇರೆಯಾಗುವುದಾಗಿ 2018ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಕಳೆದ ಡಿ.18ರಂದು ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ದಶರಥ ಹಾಗೂ ವಕೀಲರಾದ ಕೆ.ಎಸ್. ರೇಖಾ ಅವರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳಿಗೆ ದಾಂಪತ್ಯದ ಬಗ್ಗೆ ಅರಿವು ಮೂಡಿಸಿ, ಮನವೊಲಸಿ ಒಂದು ಮಾಡಿದ್ದಾರೆ.
ಇದೀಗ ದಂಪತಿಗಳು ಸಂತೋಷದಿಂದ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಪ್ರವೀಣ ನಾಯಕ್ ತಿಳಿಸಿದ್ದಾರೆ.
ಮೃತರಿಗೆ ಪರಿಹಾರ: ಇತ್ತೀಚೆಗೆ ಕುಕ್ಕುವಾಡ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕದ ಪಿಲ್ಲರ್ ಕುಸಿದು ಇಬ್ಬರು ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ಲೋಕ ಅದಾಲತ್ನಲ್ಲಿ ಗುತ್ತಿಗೆದಾರರಿಂದ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ನ್ಯಾಯಾಧೀಶರಾದ ಪ್ರವೀಣ್ ನಾಯಕ್ ಹೇಳಿದರು.
ದುರ್ಘಟನೆಯಲ್ಲಿ ಮೃತಪಟ್ಟ ರಾಯಚೂರಿನ ಮಾನಪ್ಪ ಹಾಗೂ ಬಸವರಾಜಪ್ಪ ಎಂಬವರ ಕುಟುಂಬದವರು ವ್ಯಾಜ್ಯಪೂರ್ವ ಪ್ರಕರಣ ದಾಖಲಿಸಿದ್ದರು. ಗುತ್ತಿಗೆದಾರ ಗಂಗಪ್ಪ ಅವರಿಗೆ ನೋಟೀಸ್ ನೀಡಿ ಕರೆಸಿಕೊಂಡು ಪರಸ್ಪರ ವಿಚಾರಣೆ ನಡೆಸಿದಾಗ ಮೃತರಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಪರಿಹಾರ ಹಣದಲ್ಲಿ ಕುಟುಂಬಕ್ಕೆ ತಲಾ ಎರಡು ಲಕ್ಷ ನೀಡಿ, ಉಳಿದ ಹಣವನ್ನು ಮಕ್ಕಳ ಹೆಸರಿಗೆ ಡಿಪಾಸಿಟ್ ಇರಿಸಲಾಗಿದೆ. ವಿಮಾ ಹಣ ಬಂದ ನಂತರ ಮತ್ತಷ್ಟು ಪರಿಹಾರದ ಹಣವನ್ನು ಗುತ್ತಿಗೆದಾರರು ನೀಡಲಿದ್ದಾರೆ ಎಂದು ತಿಳಿಸಿದರು.