ದಾವಣಗೆರೆ, ಸೆ.23- ಲಿಂಗಾಯತ ಪಂಚಮಸಾಲಿ ಜಗದ್ಗುರು ಲಿಂ. ಡಾ. ಮಹಂತ ಮಹಾಸ್ವಾಮಿಗಳವರ ಜಯಂತ್ಯೋತ್ಸವ, ಕರ್ನಾಟಕ ಸರ್ಕಾರದಿಂದ 2ಎ ಮೀಸಲಾತಿಯನ್ನು ಸಮಾಜಕ್ಕೆ ಪಡೆಯುವ ಉದ್ದೇಶದಿಂದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜೆ. ಅಜಯ್ ಕುಮಾರ್ ಪದಗ್ರಹಣ ಸಮಾರಂಭ ಇದೇ ದಿನಾಂಕ 30 ರ ಗುರುವಾರ ಸಂಜೆ 5 ಗಂಟೆಗೆ ನಗರದ ತ್ರಿಶೂಲ್ ಕಲಾ ಭವನದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕರೂ, 2ಎ ಮೀಸಲಾತಿ ಹೋರಾಟ ಸಮಿತಿ ಮಹಾಪ್ರಧಾನ ಕಾರ್ಯದರ್ಶಿಯೂ ಆದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂದು ಮಧ್ಯಾಹ್ನ 3 ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ 5 ಸಾವಿರ ಬೈಕ್‌ಗಳ ರಾಲಿ ನಡೆಯಲಿದ್ದು, 4 ಗಂಟೆಗೆ ಗಾಂಧಿ ವೃತ್ತದಿಂದ ವಿವಿಧ ಜಾನಪದ ವಾದ್ಯ ಮೇಳಗಳೊಂದಿಗೆ ಜಗದ್ಗುರುಗಳನ್ನು ಮೆರವಣಿಗೆ ಮೂಲಕ ತ್ರಿಶೂಲ್ ಕಲಾಭವನದ ವರೆಗೆ ಕರೆದೊಯ್ಯಲಾಗುವುದು. ಇದೇ ವೇಳೆ ಶ್ರೀಶೈಲ, ಹೊನ್ನಾಳಿ ಮತ್ತು ಐರಣಿ ಮಠದ ಆನೆಗಳು ಪಾಲ್ಗೊಳ್ಳುವುದು ವಿಶೇಷವಾಗಿದೆ. ಇದು ನಮ್ಮ ಸಮಾಜಕ್ಕೆ ಆನೆ ಬಲ ಬಂದಂತೆ ಎಂದರು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50 ಸಾವಿರ ಸಮಾಜ ಬಂಧುಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್, ಮುಖಂಡ ರಾದ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿ ದಂತೆ ನಾಡಿನ ವಿವಿಧ ಮಠಾಧೀಶರು, ಸಮಾಜದ ಸಚಿವರು, ಶಾಸಕರು, ಸಂಸದರು, ವಿವಿಧ ಹಂತದ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳನ್ನು ಕೂಡ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಜೊತೆಗೆ ಇತರೆ ಲಿಂಗಾಯತ ಸಮಾಜದ ಒಳಪಂಗಡಗಳಿಗೆ ಒಬಿಸಿ ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿದರು.
ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಸಮಾಜದ ಶಕ್ತಿ ಪ್ರದರ್ಶನ ಮಾಡಿ, ಮನವಿ ಕೂಡ ಸಲ್ಲಿಸಲಾಗಿತ್ತು. ಆದರೆ ಸಮಾಜಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ಸಮಾಜದ ಜನರು ಒಗ್ಗೂಡಿ ಅ. 1 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ತಿಳಿಸಿದರು.
ಮೈಸೂರು ಭಾಗದ ಗೌಡ ಲಿಂಗಾಯತರು, ಶಿವಮೊಗ್ಗ ಭಾಗದ ಮಲೆಗೌಡರು, ಬೆಳಗಾಂನ ದೀಕ್ಷಾ ಲಿಂಗಾಯತರು ಕೂಡ ಪಂಚಮಸಾಲಿ ಸಮಾಜವನ್ನು ಬೆಂಬಲಿಸಿದ್ದಾರೆ. ವಾಲ್ಮೀಕಿ, ಹಾಲುಮತ ಸಮಾಜದವರು ಕೂಡ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ್ ಗೋಪನಾಳ್, ಮೋತಿ ಟಿ. ಶಂಕರಪ್ಪ, ಎಸ್. ಓಂಕಾರಪ್ಪ, ಮಹಾಂತೇಶ್ ಒಣರೊಟ್ಟಿ, ಪ್ರಭು ಕಲ್ಬುರ್ಗಿ, ಮಂಜಪ್ಪ ಹರಿಹರ, ಬಾತಿ ಶ್ರೀಧರ್, ಪ್ರಶಾಂತ್, ಬಸವರಾಜ್ ಬೆಳಲಗೆರೆ, ಸ್ವಾಗಿ ಶಾಂತಕುಮಾರ್, ಸ್ವಾಗಿ ಮುರುಗೇಶ್ ಮತ್ತಿತರರಿದ್ದರು.