ಮೊಟ್ಟೆ ಯೋಜನೆ ಕೈಬಿಡದಿರಲು ಒತ್ತಾಯ

ದಾವಣಗೆರೆ, ಡಿ.14- ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಮೊಟಕುಗೊಳಿಸಿದರೆ ಮಕ್ಕಳ ಆಹಾರದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಮಲ್ಲಾಪುರ ದೇವರಾಜ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪೌಷ್ಠಿಕ ಆಹಾರವಾಗಿ ಮೊಟ್ಟೆ ವಿತರಿಸುತ್ತಿರುವುದು ರಾಜ್ಯದ ದುರ್ಬಲ ವರ್ಗದ ಮಕ್ಕಳಿಗೆ ಅನುಕೂಲಕರವಾಗಿದೆ. ಆದರೆ ಕೆಲ ಮಠಾಧೀಶರರು, ಸಂಘಟನೆಗಳು ಇದನ್ನು ವಿರೋಧಿಸುತ್ತಿರುವುದು ದುರದೃಷ್ಟಕರ ಎಂದರು.

ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ಮೊಟ್ಟೆಗಳನ್ನು ಮಕ್ಕಳಿಗೆ ವಿತರಿಸುವುದನ್ನು ಕಡ್ಡಾಯ ಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಇದರಿಂದ ಕೋಳಿ ಮಾಂಸ, ಮೊಟ್ಟೆ ಉತ್ಪಾದಿಸುವ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮೊಟ್ಟೆ ವಿತರಣೆ ಸ್ಥಗಿತಗೊಳಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಐಗೂರು ಶಿವಮೂರ್ತಿ, ಅಣಜಿ ಶಿವಮೂರ್ತಿ, ಹುಲಿಕಟ್ಟೆ ತಿಮ್ಮೇಶ್, ನೂರುದ್ದೀನ್ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!