ದಾವಣಗೆರೆ, ಸೆ. 7 – ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಸಲಾದ ನಿವೇಶನ ಬೇಡಿಕೆ ಸಮೀಕ್ಷೆಯಲ್ಲಿ 22 ಸಾವಿರದಷ್ಟು ಅರ್ಜಿಗಳು ದಾಖಲಾಗಿವೆ.
ಕಳೆದ ಆಗಸ್ಟ್ 11ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆಗಸ್ಟ್ 26ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತಾದರೂ, ಬೇಡಿಕೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಯ ಅವಧಿಯನ್ನು ಸೆಪ್ಟೆಂಬರ್ 4ರವರೆಗೆ ವಿಸ್ತರಿಸಲಾಗಿತ್ತು.
ಈ ಅವಧಿಯಲ್ಲಿ ಸಾರ್ವಜನಿಕರು 24,500 ಚಲನ್‌ಗಳನ್ನು ಪಡೆದಿದ್ದು, 22,050 ಅರ್ಜಿಗಳನ್ನು ದಾಖಲಿಸಿದ್ದಾರೆ.
ಅರ್ಜಿ ಸಲ್ಲಿಕೆಗಾಗಿ ಸಾಕಷ್ಟು ನೂಕು ನುಗ್ಗಲು ಉಂಟಾಗಿತ್ತು. ಅರ್ಜಿ ಸಲ್ಲಿಸಲು ಮಧ್ಯವರ್ತಿಗಳೂ ಹುಟ್ಟಿಕೊಂಡಿದ್ದು, ಈ ಬಗ್ಗೆ ದೂಡಾದಿಂದ ಪೊಲೀಸರಲ್ಲಿ ದೂರು ಸಹ ದಾಖಲಿಸಿದ ಬೆಳವಣಿಗೆಯಾಗಿತ್ತು.
ಜನರು ಸಲ್ಲಿಸಿರುವ ಅರ್ಜಿಗಳ ಆಧಾರದ ಮೇಲೆ ಬೇಡಿಕೆಯ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರದಿಂದ ಅನುಮೋದನೆ ಬಂದ ನಂತರ ಅಗತ್ಯ ಪ್ರಮಾಣದಲ್ಲಿ ಜಮೀನು ಖರೀದಿಸಿ ನಿವೇಶಗಳನ್ನು ರೂಪಿಸಲಾಗುವುದು ಎಂದು ದೂಡಾ ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ಹಂತದಲ್ಲಿ ನಿವೇಶನ ಬಯಸುವವರು, ನಿವೇಶನದ ಮೊತ್ತದ ಶೇ.25ರಷ್ಟನ್ನು ಮುಂಗಡವಾಗಿ ಪಾವತಿಸಬೇಕಾಗುತ್ತದೆ. ನಂತರದಲ್ಲಿ ನಿವೇಶನ ಹಂಚಿಕೆಯಾಗಲಿದೆ ಎಂದವರು ಹೇಳಿದ್ದಾರೆ.