ದಿನೇಶ್ ಕೆ.ಶೆಟ್ಟಿ ಆರೋಪ
ದಾವಣಗೆರೆ, ಡಿ.1- ನಗರ ಪಾಲಿಕೆಯ 17ನೇ ವಾರ್ಡ್‍ನ ಪಿ.ಜೆ.ಬಡಾವಣೆಯ ಡಾ|| ಶಿವಲಿಂಗಪ್ಪನವರ ಮನೆಯಿಂದ ಮಹಾವೀರ ವೃತ್ತದವರೆಗೆ ನಿರ್ಮಿಸುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಈ ವಾರ್ಡಿನ ಪಾಲಿಕೆ ಸದಸ್ಯ ಬಿ.ಜೆ.ಅಜಯ್ ಕುಮಾರ್ ಅವರು, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಅವರು ಆರೋಪಿಸಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಅಭಿವೃದ್ಧಿಗೆ ನಮ್ಮ ಸಹಮತ ಇದೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ಮುಂದಾ ಗುವುದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚ ರಿಸಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿ ಕಲ್ಯಾಣ ಇಲಾಖೆಯಡಿ ಸುಮಾರು 2 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸುತ್ತಿರುವ ಈ ಕಾಮಗಾರಿ ಸಂಪೂ ರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಕಳೆದ 5 ವರ್ಷಗಳ ಹಿಂದೆ ಸಿಮೇಂಟ್ ರಸ್ತೆ ನಿರ್ಮಾಣವಾಗಿದ್ದು, ರಸ್ತೆ ಹಾಳಾಗಾದೆ ಇದ್ದರೂ ಸಹ ಅದೇ ರಸ್ತೆ ಮೇಲೆಯೇ ಸಿಮೇಂಟ್ ರಸ್ತೆ ನಿರ್ಮಾಣ ಮಾಡುವ ಮೂಲಕ ಅವೈಜ್ಞಾನಿಕ ಕೆಲಸಕ್ಕೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮುಂದಾಗಿದೆ. ಇದಕ್ಕೆ ಮಹಾನಗರ ಪಾಲಿಕೆ ಸದಸ್ಯರೂ ಸಹ ಕೈಜೋಡಿಸಿರುವುದನ್ನು ದಿನೇಶ್ ಶೆಟ್ಟಿ ಖಂಡಿಸಿದ್ದಾರೆ.
ಅವೈಜ್ಞಾನಿಕ ರಸ್ತೆ ಕುರಿತಂತೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು, ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದರೆ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್, ಸ್ಥಳೀಯ ನಿವಾಸಿಗಳಾದ ವಿಜಯಕುಮಾರ್ ಜೈನ್, ಪ್ರಭು, ಗೋಪಾಲ್ (ಅಂತು), ಪಂಚಣ್ಣ ತೆರದಾಳ್ ಮತ್ತಿತರರಿದ್ದರು.