ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ನಿರ್ಣಯ ಕೈಗೊಳ್ಳಲು ಆಗ್ರಹ

ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ನಿರ್ಣಯ ಕೈಗೊಳ್ಳಲು ಆಗ್ರಹ - Janathavaniದಾವಣಗೆರೆ, ಸೆ.7- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಅವೈಜ್ಞಾನಿಕವಾಗಿದ್ದು, ಮಹಾನಗರ ಪಾಲಿಕೆ ತಕ್ಷಣ ಅವೈಜ್ಞಾನಿಕ ಆಸ್ತಿ ತೆರಿಗೆಯನ್ನು ರದ್ದು ಪಡಿಸಿ ಹಿಂದಿನ ಆಸ್ತಿ ತೆರಿಗೆಯನ್ನೇ ಮುಂದುವರೆಸಬೇಕೆಂದು ಪಾಲಿಕೆ ಮಾಜಿ ಸದಸ್ಯರೂ, ನಗರಸಭೆ ಮಾಜಿ ಅಧ್ಯಕ್ಷರೂ ಆದ ದಿನೇಶ್ ಕೆ.ಶೆಟ್ಟಿ ಅವರು ಒತ್ತಾಯಿಸಿದ್ದಾರೆ.

 ನಾಳೆ ದಿನಾಂಕ 8 ರಂದು ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳವನ್ನು ಹಿಂಪಡೆಯಲು ನಿರ್ಣಯ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಬೀಳಲಿದೆ. ಹೊಸ ನಿಯಮದ ಪ್ರಕಾರ ಮೊದಲಿದ್ದ ತೆರಿಗೆ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಖಾಲಿ ನಿವೇಶನಗಳಿಗೆ ಉಪನೋಂದಣಾಧಿಕಾರಿಗಳ ಕಛೇರಿಯ ಎಸ್ ಆರ್ ದರದ ಆಧಾರದ ಮೇಲೆ ಕಂದಾಯ ಹೆಚ್ಚಳ ಮಾಡಲಾಗಿದ್ದು, ಕಳೆದ ವರ್ಷ 1 ಸಾವಿರ ಕಂದಾಯ ಕಟ್ಟುತ್ತಿದ್ದ ಮಾಲೀಕ ಇಂದು 5 ಸಾವಿರ ರೂ. ಕಂದಾಯ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ದೂರಿದರು.

ಜನಸಾಮಾನ್ಯರಿಗೆ ಹೊರೆಯಾಗುವ ರೀತಿಯಲ್ಲಿ ಕಂದಾಯ ಏರಿಕೆ ಮಾಡಿರುವುದು ತುಘಲಕ್ ದರ್ಬಾರ್ ಎನ್ನುವಂತಾಗಿದೆ. ಎಸ್ ಆರ್ ದರ ಆಧರಿಸಿ ತೆರಿಗೆಯನ್ನು ಕೂಡಾ ಹೆಚ್ಚಳ ಮಾಡುವ ವಿಧಾನ ಹೊಸ ಕಾನೂನಿನ ತಿದ್ದುಪಡಿಯಲ್ಲಿ ಸೇರಿದೆ. ಇದರ ಪ್ರಕಾರ ವಿವಿಧ ಬಡಾವಣೆಗಳಲ್ಲಿ ಕಳೆದ 14 ವರ್ಷಗಳಲ್ಲಿ ಎಸ್ ಆರ್ ದರ ಗರಿಷ್ಠವಾಗಿ ಏರಿಕೆ ಆಗಿದೆ. ಬಹುತೇಕ ಬಡಾವಣೆಗಳಲ್ಲಿ ಪ್ರತಿವರ್ಷ ಶೇ.20ರಿಂದ 100 ರಷ್ಟು ದರ ಏರಿಕೆಯಾಗಿದೆ. ಈ ರೀತಿಯಾದ್ರೆ ಆಸ್ತಿ ಮಾಲೀಕರು ತಮ್ಮ ಆಸ್ತಿ ಮಾರಾಟ ಮಾಡಿ ತೆರಿಗೆ ಪಾವತಿ ಮಾಡಬೇಕಾದ ಪರಿಸ್ಥಿತಿ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕಟ್ಟಡಗಳ ಸುತ್ತ ಸಾವಿರ ಅಡಿಗೂ ಹೆಚ್ಚಿನ ಜಾಗಕ್ಕೆ ಪ್ರಸ್ತುತ ತೆರಿಗೆ ಹಾಕಲಾಗುತ್ತಿದೆ. ಕಟ್ಟಡಗಳ ಸುತ್ತ ಖಾಲಿ ಜಾಗ ಬಿಡುವುದು ಕಡ್ಡಾಯ. ಅಲ್ಲದೇ ಉತ್ತಮ ಪರಿಸರಕ್ಕೂ ಅನುಕೂಲ. ಇಂತಹ ಖಾಲಿ ಜಾಗಕ್ಕೂ ತೆರಿಗೆ ವಿಧಿಸಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದ್ದು, ಇದನ್ನು ಕೈಬಿಟ್ಟು ಹಿಂದಿನ ತೆರಿಗೆ ಪದ್ಧತಿಯನ್ನೇ ಮುಂದುವರೆಸುವಂತೆ ದಿನೇಶ್   ಆಗ್ರಹಿಸಿದ್ದಾರೆ.

error: Content is protected !!