ರೌಡಿಶೀಟರ್‌ಗಳ ವಿರುದ್ಧ ದೂರು ನೀಡಲು ಹಿಂಜರಿಯಬೇಡಿ : ಎಸ್ಪಿ

ದಾವಣಗೆರೆ, ಆ.26- ಜಾಮೀನಿನ ಮೇಲೆ ಹೊರಗಿರುವ ಕೆಲವರು ಈಗಲೂ ರಾಜೀ ಪಂಚಾಯಿತಿ, ಭೂ ವ್ಯಾಜ್ಯ ಇತ್ಯರ್ಥ, ಬಡ್ಡಿ ವ್ಯವಹಾರ, ಹಣ ಸುಲಿಗೆಯಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದೆ. ಅಂತಹವರ ವಿರುದ್ಧ ದೂರು ಕೊಡಲು ಜನರು ಹಿಂಜರಿಯಬಾರದು. ದೂರು ನೀಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ರೌಡಿಶೀಟರ್‌ಗಳ ಪರೇಡ್ ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೌಡಿಶೀಟ್‌ನಲ್ಲಿರುವ ಕೆಲವರು ಈಗಲೂ ವಿವಿಧ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಆದರೆ, ಇವರ ಬಗ್ಗೆ ದೂರು ನೀಡಲು ಸಮಾಜದಲ್ಲಿ ಕೆಲವರು ಹೆದರುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದರೆ ಸುಮ್ಮನಿರಲ್ಲ. ಸಾರ್ವಜನಿಕರು ಭಯ ಪಡದೇ ದೂರು ನೀಡಬೇಕು. ಇಂತಹ ಯಾವುದೇ ವ್ಯಕ್ತಿಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.

ಈಗಲೂ ಕೆಲವರು ಅಕ್ರಮ ಚಟುವಟಿಕೆ ನಡೆಸುವವರ ಮೇಲೆ ನಿಗಾ ಇಡಲಾಗುವುದು. ಅಲ್ಲದೇ ಅವರು ಯಾವ್ಯಾವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು. ಸಕ್ರಿಯವಾಗಿದ್ದರೆ ಮತ್ತೆ ಅಂತವರನ್ನು ಜೈಲಿಗೆ ಕಳಿಸಲಾಗುವುದು ಎಂದು ಮುನ್ನೆಚ್ಚರಿಸಿದರು.

ಮಿಸ್ ಫೈರ್‌ನಿಂದ ಸಾವಿಗೀಡಾದ ಚೇತನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಬೆಂಗಳೂರಿನಿಂದ ಆಗಮಿಸಿದ್ದ ತಜ್ಞರ ತಂಡ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದೆ  ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

error: Content is protected !!