ಇಬ್ಬರ ವಿರುದ್ಧ ದೂರು
ದಾವಣಗೆರೆ, ಆ.19- ಇಲ್ಲಿನ ಬೆಸ್ಕಾಂ ವಿಭಾಗದಲ್ಲಿ ಉದ್ಯೋಗ ಪಡೆಯುವ ಉದ್ದೇಶದಿಂದ ಇಬ್ಬರು ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸೃಷ್ಟಿಸಿ ವಾಮ ಮಾರ್ಗದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡು ಮೋಸ ಮಾಡಿರುವುದಾಗಿ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಲಾಳೇಮಶಾಕ್ ನಾಯ್ಕೊಡಿ, ಬಸವನಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದ ಹುಸೇನ್ ಸಾ ಸರಸುಣಗಿ ಎಂಬುವರ ವಿರುದ್ಧ ವಂಚನೆ ದೂರು ದಾಖಲಾಗಿದೆ.
ಕಳೆದ ಫೆ.10,2015ರಂದು ಬೆಸ್ಕಾಂ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಮಾರ್ಗದಾಳು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ನೇಮಕಾತಿ ನಿಯಮಗಳ ಅನ್ವಯ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ, ಬೆಸ್ಕಾಂ ನೌಕರಿ ಪಡೆಯಲು ಸಲ್ಲಿಸಿರುವ ಅಂಕ ಪಟ್ಟಿ, ಮೀಸಲಾತಿ ಪ್ರಮಾಣ ಪತ್ರದ ದಾಖಲೆ ಮತ್ತು ಮಾಹಿತಿಗಳು ಸತ್ಯವಾಗಿರುತ್ತವೆ. ಒಂದು ವೇಳೆ ಸಲ್ಲಿಸಿರುವ ಮಾಹಿತಿ, ದಾಖಲೆಗಳು ತಪ್ಪು ಅಥವಾ ಸುಳ್ಳ ಎಂದಾದರೆ ಅಂತಹ ಅಭ್ಯರ್ಥಿಗಳನ್ನು ಯಾವುದೇ ಸೂಚನೆ ನೀಡದೆ ಸೇವೆಯಿಂದ ವಜಾಗೊಳಿಸುವ ಮತ್ತು ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಷರತ್ತಿಗೊಳ್ಳಪಡಿಸಿ 53 ಅಭ್ಯರ್ಥಿಗಳಿಗೆ ದಾವಣಗೆರೆ ವಿಭಾಗಕ್ಕೆ ನೇಮಕಾತಿ ಆದೇಶ ನೀಡಲಾಗಿತ್ತು. ನಂತರ ಈ ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಮಾನದಂಡವಾದ ಐಟಿಐ ಅಂಕಪಟ್ಟಿ, ಪ್ರಮಾಣ ಪತ್ರಗಳ ಸಕ್ಷಮ ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಪ್ರಾಧಿಕಾರಿಗಳಾದ ಆಯುಕ್ತರಿಗೆ ಅಂಕಪಟ್ಟಿ, ಪ್ರಮಾಣ ಪತ್ರ ನೈಜತೆಯ ಪರಿಶೀಲನೆಗಾಗಿ ಫೆ.25, 2017ರಂದು ಕಳುಹಿಸಲಾಗಿತ್ತು. ಇವುಗಳನ್ನು ಪರಿಶೀಲಿಸಿ ಜು.13, 2021 ರಂದು ನೈಜತೆಯ ವರದಿ ನೀಡಿದ್ದು, ಅದರಲ್ಲಿ ಲಾಳೇಮಶಾಕ್ ನಾಯ್ಕೊಡಿ, ಹುಸೇನ್ ಸಾ ಸರಸುಣಗಿ ಎಂಬ ಅಭ್ಯರ್ಥಿಗಳಿಬ್ಬರ ಅಂಕ ಪಟ್ಟಿ ನೈಜವಾಗಿಲ್ಲವೆಂಬ ಸ್ಟಷ್ಟೀಕರಣ ನೀಡಲಾಗಿದೆ.
ಉದ್ಯೋಗ ಪಡೆಯುವ ಉದ್ದೇಶದಿಂದ ನಕಲಿ ಅಂಕಪಟ್ಟಿ ಸೃಷ್ಟಿಸಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿ ವಾಮಮಾರ್ಗದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡು ಈ ಇಬ್ಬರು ಅಭ್ಯರ್ಥಿಗಳು ವಂಚಿಸಿರುವುದಾಗಿ ದಾವಣಗೆರೆಯ ಬೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ನೇಮಕಾತಿ ಪ್ರಾಧಿಕಾರಿಯೂ ಆದ ಎಸ್.ಕೆ. ಪಟೇಲ್ ದೂರು ನೀಡಿದ್ದಾರೆ.