ದಾವಣಗೆರೆ, ಮಾ.29- ಸಿಡಿ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹೇಳಿಕೆ ನೀಡಿ ಹಲವಾರು ದಿನಗಳಾದರೂ ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿ ಹೊಳಿಯವರನ್ನು ಬಂಧಿಸದಿರುವುದು ದುರಂತ. ಕೂಡಲೇ ಜಾರಕಿಹೊಳಿ ಅವ ರನ್ನು ಬಂಧಿಸಬೇಕು. ಸಂತ್ರಸ್ತೆ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಸಿಡಿ ಪ್ರಕರಣ ಕುರಿತು ಇಲ್ಲಿಯವರೆಗೂ ಯಾವ ಹೇಳಿಕೆ ಯನ್ನೂ ನೀಡದೇ ಇರುವುದು ಗಮನಿಸಿದರೆ, ಈ ಪ್ರಕರಣವನ್ನು ಮುಚ್ಚಿ ಹಾಕುವ ತಂತ್ರ ನಡೆಯುತ್ತಿದೆ ಎಂಬ ಅನುಮಾನಗಳು ಮೂಡಿ ಬರುತ್ತಿವೆ. ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲಿಯೇ ಉತ್ತಮ ಗೌರವವಿತ್ತು. ಆದರೆ ಈ ಪ್ರಕರಣದಿಂದಾಗಿ ಇಲಾಖೆಗೆ ಕಳಂಕ ಬಂದಿದೆ ಎಂದರು.
ರಾಮರಾಜ್ಯದ ಹೆಸರಿನಲ್ಲಿ ರಾವಣ ರಾಜ್ಯ ನಡೆಯುತ್ತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರಕ್ಕೆ ಸ್ತ್ರೀ ಕಂಟಕ ಇದ್ದು, ಈ ಪ್ರಕರಣದಿಂದಲೇ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರ ವಾಹನ ತಡೆದು ಪ್ರತಿಭಟನೆ ನಡೆಸುವುದು, ಚಪ್ಪಲಿ ಎಸೆಯುವ ಕೃತ್ಯವನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದ ಬಸವರಾಜ್, ಡಿಕೆಶಿ ಅವರಿಗೆ ರಕ್ಷಣೆ ಕೊಡದೇ ಸರ್ಕಾರವೇ ಕಲ್ಲು ಹೊಡೆಸುತ್ತಿದೆ ಎಂದು ಆರೋಪಿಸಿದರು.
ಮುಂದಿನ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಹಲ್ಲೆಗಳು ನಡೆದರೆ, ಬಿಜೆಪಿ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಬಸವರಾಜ್ ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಶಾಮನೂರು ಟಿ.ಬಸವರಾಜ್ ಮಾತನಾಡಿ, ಸಿಡಿ ಪ್ರಕರ ಣದ ಆರೋಪ ಹೊತ್ತಿರುವವರನ್ನು ಇಲ್ಲಿಯ ವರೆಗೆ ಬಂಧಿಸಲು ಸಾಧ್ಯವಾಗಿಲ್ಲ. ಸಂತ್ರಸ್ತೆ ಯನ್ನು ಪತ್ತೆ ಹಚ್ಚಲಾಗಿಲ್ಲ ಎಂದರೆ ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂದರು. ತುರ್ತಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಸುಭಾನ್ ಸಾಬ್, ಕೆ.ಎಂ. ಮಂಜುನಾಥ್, ಹೆಚ್.ಇಮ್ತಿಯಾಜ್ ಬೇಗ್, ಲಿಯಾಖತ್ ಅಲಿ ಎಂ.ಕೆ., ಭಾಷಾ, ಡಿ.ಶಿವಕುಮಾರ್ ಉಪಸ್ಥಿತರಿದ್ದರು.