ಮಲೇಬೆನ್ನೂರು, ಮಾ.29 – ಸರ್ಕಾರದ ನಿರ್ಬಂಧದ ನಡುವೆಯೂ ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ರಥೋತ್ಸವವು ಸೋಮವಾರ ಮಧ್ಯಾಹ್ನ ಸಂಪ್ರದಾಯದಂತೆ ಸರಳವಾಗಿ ಜರುಗಿತು.
ಶ್ರೀ ಹನುಮಂತ ದೇವರ ರಥಕ್ಕೆ ತಹಶೀಲ್ದಾರ್ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಬೇಕಾಗಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚು ಜನ ಸೇರುವ ಜಾತ್ರೆ, ಹಬ್ಬ ಆಚರಣೆಗಳನ್ನು ನಿರ್ಬಂಧಿಸಿರುವುದರಿಂದ ಅಧಿಕಾರಿಗಳು ಭಾಗವಹಿಸದ ಕಾರಣ ಗ್ರಾಮಸ್ಥರು ಪ್ರತಿ ವರ್ಷದ ಪದ್ದತಿಯಂತೆ ರಥಕ್ಕೆ ಪೂಜೆ ಸಲ್ಲಿಸಿ, ಎರಡು ಹೆಜ್ಜೆ ಮಾತ್ರ ರಥ ಎಳೆದರು.
ನಿಟ್ಟೂರು ಆಂಜನೇಯ ಸ್ವಾಮಿ ಗ್ರಾಮದ ಬಸವೇಶ್ವರ, ಬೀರಲಿಂಗೇಶ್ವರ, ಭೂತಪ್ಪ ಸೇರಿದಂತೆ ಎಲ್ಲಾ ದೇವರುಗಳ ಸಮ್ಮುಖದಲ್ಲಿ ನೆರವೇರಿದ ಸರಳ ರಥೋತ್ಸವಕ್ಕೆ ಸ್ವಲ್ಪ ಜನ ಸಾಕ್ಷಿಯಾದರು.
ಈ ಬಾರಿ ಅನ್ನ ಸಂತರ್ಪಣೆಯನ್ನು ರದ್ದು ಪಡಿಸಲಾಗಿತ್ತು, ಜಾತ್ರೆಯ ವಾತಾವರಣ ಎಂದಿನಂತೆ ಇತ್ತು. ಜನರಲ್ಲಿ ಹಬ್ಬದ ಸಂಭ್ರಮ ಇತ್ತಾದರೂ ಹೆಚ್ಚು ಜನರ ಓಡಾಟ ಕಂಡು ಬರಲಿಲ್ಲ. ರಥೋತ್ಸವದ ನಂತರ ಭಕ್ತಾದಿಗಳಿಂದ ಹರಕೆ, ಬಾಯಿ ಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳು ಸೇವೆ ನಡೆದವು ದೇವಸ್ಥಾನಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾರ ಸಂಜೆ ಸಂಪ್ರದಾಯದಂತೆ ಶ್ರೀ ಹನುಮಂತ ದೇವರ ಮುಳ್ಳೋತ್ಸವ ಸರಳವಾಗಿ ನಡೆಯ ಬಹುದೆಂದು ಹೇಳಲಾಗಿದೆ.
ಬೆಳ್ಳಿ ಬೆತ್ತ ಕೊಡುಗೆ: ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿಗೆ ರೈಸ್ ಮಿಲ್ ಮಾಲೀಕರಾದ ವೈ. ವಿರೂಪಾಕ್ಷಪ್ಪ ಮತ್ತು ಶ್ರೀಮತಿ ಗಂಗಮ್ಮ ಬೆಳ್ಳಿ ಬೆತ್ತವನ್ನು ಕೊಡುಗೆಯಾಗಿ ನೀಡಿದರು.