ರಾಣೇಬೆನ್ನೂರು, ಮಾ.28- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಎಲ್ಲ ಮಾಹಿತಿ ತರಿಸಿಕೊಂಡಿದ್ದಾರೆ. ಮೇ 2 ರ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನಿನ್ನೆ ಶರಣು-ಶರಣಾರ್ಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು.
ಹಿಂದೂಗಳನ್ನು ಬಯ್ಯುವ ಜಮೀರ್ ಆಹ್ಮದ್, ಕಾಂಗ್ರೆಸ್ನ ಸಿದ್ರಾಮಯ್ಯ, ಜೆಡಿಎಸ್ನ ಕುಮಾರಸ್ವಾಮಿ, ಬೀಗರಾದ ಜಿಪಂ ಅಧ್ಯಕ್ಷ ಮರಿಸ್ವಾಮಿ, ಬಿಜೆಪಿಯ ಕೆಲ ಶಾಸಕರಿಗೆ ಅನುದಾನ ಕೊಡುವ ಯಡಿಯೂರಪ್ಪ ಅವರು, ಉಳಿದ ಶಾಸಕರಿಗೆ ಕೊಡುತ್ತಿಲ್ಲ. ವಿಷ ಕುಡಿಯಲು ಕಾಸಿಲ್ಲ ಎಂದು ಹೇಳುತ್ತಾರೆ. ಇವರದು ಹೊಂದಾಣಿಕೆ ರಾಜಕಾರಣ. ಈ ಎಲ್ಲ ಮಾಹಿತಿ ಪ್ರಧಾನ ಮಂತ್ರಿಗಳ ಗಮನಕ್ಕೆ ಬಂದಿದೆ ಎಂದು ಶಾಸಕ ಯತ್ನಾಳ್ ಹೇಳಿದರು.
ಸಿಡಿಯಲ್ಲಿ ಕಾಂಗ್ರೆಸ್ ಮಹಾನಾಯಕನ ಹೆಸರು ಬಹಿರಂಗಗೊಂಡಂತೆ, ಬಿಜೆಪಿ ಯುವರಾಜನ ಹೆಸರೂ ಬಹಿರಂಗಗೊಳ್ಳಲಿದೆ. ಇವರ ಬಳಿ ಶಾಸಕರ, ಸಂಸದರ, ಅಧಿಕಾರಿಗಳ ಎಲ್ಲರ ಸಿಡಿಗಳಿವೆ. ಅವರೆಲ್ಲರನ್ನೂ ಹೆದರಿಸುವುದು ಇವರ ಕೆಲಸ. ಎಲ್ಲ ಪಕ್ಷಗಳಲ್ಲೂ ಭ್ರಷ್ಟರ ಹಾಗೂ ಪ್ರಾಮಾಣಿಕರ ಎರಡು ಗುಂಪುಗಳ ಶಾಸಕರಿದ್ದಾರೆ ಎಂದು ಯತ್ನಾಳ್ ಹೇಳಿದರು.
ಇದುವರೆಗೂ ಒಂದೇ ಒಂದು ಬಾರಿ ಬಿಜೆಪಿ ಶಾಸಕಾಂಗದ ಸಭೆ ಕರೆದಿಲ್ಲ. ನನ್ನ ವಿರುದ್ಧ ಒಬ್ಬ ಶಾಸಕರೂ ಸಹಿ ಮಾಡಿಲ್ಲ. ಎಲ್ಲ ಶಾಸಕರು ನನ್ನ ಪರವಾಗಿರುವುದಾಗಿ ಸಹಿ ಮಾಡಿಸಲು ಬಂದವರಿಗೆ ಹೇಳಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ಕುಟುಂಬದ ಸರ್ಕಾರ ಇದೆ. ಮೋದಿ ಅವರು ಕುಟುಂಬ ರಾಜಕಾರಣದ ವಿರುದ್ಧವಿದ್ದಾರೆ. ಮೇ 2 ರ ನಂತರ ಗಟ್ಟಿ ನಿರ್ಧಾರ ಬರಲಿದೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತ ಪಡಿಸಿದರು.