ಭಾರತದ ಕುಟುಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಿದೆ

ಎಬಿಎಪಿ ಸಂಯೋಜಕ ಸುಬ್ರಹ್ಮಣ್ಯ ಭಟ್‌

ದಾವಣಗೆರೆ, ಮಾ. 28 – ಭಾರತೀಯ ಕೌಟುಂಬಿಕ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ತುಸು ಸಡಿಲವಾಗಿದ್ದರೂ ಸಹ, ನಶಿಸುತ್ತಿಲ್ಲ. ಹಿಂದಿನ ಕಾಲದ ಕೌಟುಂಬಿಕ ಆದರ್ಶಗಳ ಮರು ಸ್ಮರಣೆ ಮೂಲಕ ಕುಟುಂಬಗಳನ್ನು ಗಟ್ಟಿಗೊಳಿಸಬೇಕಿದೆ ಎಂದು ಅಖಿಲ ಭಾರತ ಅಧಿವಕ್ತ ಪರಿಷತ್‌ನ ಸಂಯೋಜಕ ಹಾಗೂ ಶಿಕ್ಷಣ ತಜ್ಞ ಕಜ್ಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.

ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಅಖಿಲ ಭಾರತ ಅಧಿವಕ್ತ ಪರಿಷತ್ ಹಾಗೂ ಕುಟುಂಬ ಪ್ರಬೋಧನ್ ವತಿಯಿಂದ ಆಯೋಜಿಸಲಾಗಿದ್ದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದಾಗ ಹಾಗೂ ಕೊರೊನಾ ವಾರಿಯರ್‌ಗಳಿಗೆ ದೀಪ ಬೆಳಗುವ ಮೂಲಕ ಗೌರವಿಸುವಂತೆ ಕರೆ ನೀಡಿದಾಗ ದೇಶದ ಜನರೆಲ್ಲ ಅಭೂತಪೂರ್ವವಾಗಿ ಸ್ಪಂದಿಸಿದ್ದರು. ಇದು ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯ ಸಂಕೇತ ಎಂದರು.

ಕೊರೊನಾ ಸಮಯದಲ್ಲಿ ವಿದೇಶಗಳಲ್ಲಿ ಏನೇ ಕಳವಳವಾದರೂ, ಭಾರತದಲ್ಲಿ ಸಶಕ್ತವಾಗಿ ಎದುರಿಸಿದೆವು.  ಇದಕ್ಕೆ ಕೌಟುಂಬಿಕ ವ್ಯವಸ್ಥೆಯೇ ಕಾರಣ ಎಂದು ಅವರು
 ಹೇಳಿದರು.

ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸಲು ನಾವು ಮುಂದಾಗಬೇಕಿದೆ. ವಾರಕ್ಕೆ ಒಂದು ಬಾರಿಯಾದರೂ ಜೊತೆಗೆ ಕುಳಿತು ಭಜನೆ ಹಾಗೂ ಭೋಜನಗಳಲ್ಲಿ ತೊಡಗುವುದರಿಂದ, ನಮ್ಮ ಮಾತೃಭಾಷೆಯಲ್ಲಿ ಸತ್ವವನ್ನು ಅರಿತು ಅದನ್ನು ಮಕ್ಕಳಿಗೆ ಕಲಿಸುವುದರಿಂದ ಕುಟುಂಬಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಅಧಿವಕ್ತ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ವೈ. ಮಂಜಪ್ಪ ಕಾಕನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧಿವಕ್ತ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಧನಂಜಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ವೈಭವಿ ಜೋಷಿ ಪ್ರಾರ್ಥಿಸಿದರು. ವಸಂತ ಕುಮಾರ್ ಸ್ವಾಗತಿಸಿದರು.

error: Content is protected !!