ದಾವಣಗೆರೆ, ಮಾ.28- ಪವಾಡ ಪುರುಷ ಕೈವಾರ ಯೋಗಿ ನಾರೇಯಣ ತಾತಯ್ಯನವರ ಕಂಚಿನ ಪುತ್ಥಳಿಯನ್ನು ಬೆಂಗಳೂರಿನಲ್ಲಿ ಸರ್ಕಾರದಿಂದ ನಿರ್ಮಿಸಬೇಕು ಹಾಗೂ ಅವರ ಜಯಂತ್ಯೋತ್ಸವವನ್ನು ಆಚರಿಸಬೇಕು ಎಂದು ಸಂಖ್ಯಾಶಾಸ್ತ್ರಜ್ಞ ಶ್ರೀ ಜಯ ಶ್ರೀನಿವಾಸನ್ ಗುರೂಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
17-18ನೇ ಶತಮಾನದಲ್ಲಿ ಕೈವಾರ ತಾತಯ್ಯ ಅವರು ಅಧ್ಯಾತ್ಮ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಮುಂದಿನ ಘಟನೆಗಳ ಬಗ್ಗೆ ಕಾಲಜ್ಞಾನ ರಚಿಸಿದ್ದಾರೆ. ಮಾ.28ರಂದು 295ನೇ ಜಯಂತ್ಯೋತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ ತಾತಯ್ಯನವರ ಪ್ರತಿಮೆ ನಿರ್ಮಿಸಲು ಸರ್ಕಾರ ಗಮನ ಹರಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿ ರುವ ಬಲಿಜ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ, ಪ್ರಾಧಿಕಾರ ರಚನೆಯಾಗಿಲ್ಲ. ಗುರು ಪೀಠವಾಗಲೀ, ಶ್ರೀಗಳಾಗಲೀ ಇಲ್ಲ. ಸರ್ಕಾರ ದಾವಣಗೆರೆ-ಹರಿಹರ ಭಾಗದಲ್ಲಿ ಗುರುಪೀಠ ರಚನೆ ಹಿನ್ನೆಲೆಯಲ್ಲಿ ಸಮಾಜಕ್ಕೆ 5 ಎಕರೆ ಜಾಗ ನೀಡಬೇಕು ಎಂದು ಅವರು ಆಗ್ರಹಿಸಿದರು.
ಬಲಿಜ ಸಮುದಾಯ ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳಲ್ಲಿ ಒಂದು. ಹಾವನೂರು ವರದಿಯನ್ವಯ ಈ ಸಮಾಜಕ್ಕೆ 1991ರಲ್ಲಿ 2ಎ ಮೀಸಲಾತಿ ಸೌಲಭ್ಯವನ್ನು ಒದಗಿಸ ಲಾಗಿತ್ತು. ಆದರೆ ವೀರಪ್ಪ ಮೊಯ್ಲಿ ಅವರ ಅಧಿಕಾರ ವಧಿಯಲ್ಲಿ (1994) ಸಕಾರಣವಿ ಲ್ಲದೇ 2ಎ ಮೀಸಲಾತಿ ತೆಗೆದು ಹಾಕಲಾಗಿದೆ ಎಂದರು.
ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬಲಿಜ ಸಮಾಜ 2ಎ ಮೀಸಲಿಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ವಿದ್ಯಾಭ್ಯಾಸಕ್ಕೆ ಸೀಮಿತವಾಗಿ 2ಎ ಮೀಸಲಿದ್ದರೂ ಸಮಾಜಕ್ಕೆ ತೃಪ್ತಿ ಇಲ್ಲ. ರಾಜಕೀಯ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಈಗಲೂ ಸಮಾಜ 3ಎ ಅಡಿಯಲ್ಲಿ ಸ್ಪರ್ಧೆ ಮಾಡಬೇಕಿದೆ. ಹೀಗಾಗಿ ಎಲ್ಲಾ ರಂಗಗಳಲ್ಲೂ ಸಮಗ್ರವಾಗಿ 2ಎ ಮೀಸಲು ಕಲ್ಪಿಸಬೇಕು ಎಂದು ಮನವಿ ಮಾಡಿದರು.