ದಾವಣಗೆರೆ, ಮಾ.28- ಹೋಳಿ ಹಬ್ಬದ ಮುನ್ನಾ ದಿನವಾದ ಇಂದು ರಾತ್ರಿ ಮಕ್ಕಳು, ಯುವಕರು ಸ್ಥಳೀಯವಾಗಿ ಕಾಮದಹನ ಮಾಡಿ ಸಂಭ್ರಮಿಸಿದರು. ಪುಟಾಣಿ ಮಕ್ಕಳು ಸೇರಿದಂತೆ ಯುವಕರು ತಮ್ಮ ಬಡಾವಣೆಗಳ ಖಾಲಿ ನಿವೇಶನಗಳಲ್ಲಿ ಕಾಮನ ಪ್ರತಿರೂಪ ರಚಿಸಿ, ಬೆಂಕಿ ಹಚ್ಚಿ ಸಂಭ್ರಮಿಸಿದರು. ಮಕ್ಕಳ ಸಂಭ್ರಮವೇ ಹೆಚ್ಚಾಗಿದ್ದು ಕಂಡು ಬಂತು. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಬಾರದೆಂಬ ನಿಯಮದ ಕಾರಣ ಪೊಲೀಸರು ಗಸ್ತು ತಿರುಗಿ ಮುಂಜಾಗ್ರತಾ ಕ್ರಮ ಪಾಲಿಸುವಂತೆ ಮುನ್ನೆಚ್ಚರಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕಾಮ ದಹನಕ್ಕೆ ಅವಕಾಶ ಇರಲಿಲ್ಲ. ಅಲ್ಲದೇ ಸಂಜೆ ವೇಳೆ ದಿಢೀರ್ ಮಳೆ ಸಿಂಚನವಾಗಿದ್ದರಿಂದ ಕಾಮದಹನದ ಸಂಭ್ರಮದ ಕಳೆ ಕುಂದಿದ್ದು ಸಾಮಾನ್ಯವಾಗಿತ್ತು. ಕೊರೊನಾ ಹಿನ್ನೆಲೆ ಜಿಲ್ಲಾಡಳಿತವು ಸೋಮವಾರ ಸಾರ್ವಜನಿಕವಾಗಿ ಓಕಳಿಯಾಟವನ್ನು ನಿಷೇಧಿಸಿದ್ದು, ಕೊರೊನಾ ಮುಂಜಾಗ್ರತಾ ನಿಯಮಗಳಡಿ ಕೇವಲ ಮನೆಗಳ ಅಂಗಳದಲ್ಲಷ್ಟೇ ಅವಕಾಶ ನೀಡಲಾಗಿದೆ.