ಕೊರೊನಾ ಹಿನ್ನೆಲೆ : ಕುಂಬಳೂರಿನಲ್ಲಿ ಜಾತ್ರೆ ರದ್ದು, ಗ್ರಾಮಸ್ಥರಿಗೆ ನಿರಾಸೆ

ಮಲೇಬೆನ್ನೂರು, ಮಾ.28- ಕುಂಬಳೂರು ಗ್ರಾಮದಲ್ಲಿ ಸೋಮವಾರ ಜರುಗಬೇಕಾಗಿದ್ದ ಶ್ರೀ ಹನುಮಂತ ದೇವರ ರಥೋತ್ಸವವನ್ನು ಕೊರೊನಾ ಸೋಂಕು ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ರದ್ದು ಮಾಡಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಭಾನುವಾರ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಪ್ರಚಾರ ಪಡಿಸಿದರು.

ಕುಂಬಳೂರು ರಥೋತ್ಸವ ಅಷ್ಟೇ ಅಲ್ಲ, ಹೆಚ್ಚು ಜನ ಸೇರುವ ಎಲ್ಲಾ ಜಾತ್ರೆ, ಹಬ್ಬ ಆಚರಣೆಗಳಿಗೆ ಸರ್ಕಾರ ನಿರ್ಬಂಧ ಹೇರಿದೆ ಎಂದು ಉಪ ತಹಶೀಲ್ದಾರ್ ಆರ್.ರವಿ, ಗ್ರಾಮ ಲೆಕ್ಕಾಧಿಕಾರಿ ಶ್ರೀಧರಮೂರ್ತಿ  `ಜನತಾವಾಣಿ’ಗೆ ತಿಳಿಸಿದರು. 

ಹಬ್ಬಕ್ಕೆ ಸಜ್ಜಾಗಿರುವ ಗ್ರಾಮ : ಸೋಮವಾರ ಮತ್ತು ಮಂಗಳವಾರ  ನಡೆಯಬೇಕಾಗಿದ್ದ ಶ್ರೀ ಹನುಮಂತ ದೇವರ ರಥೋತ್ಸವ ಮತ್ತು ಮುಳ್ಳೋತ್ಸವಕ್ಕೆ ಕುಂಬಳೂರು ಗ್ರಾಮ ಸಜ್ಜಾಗಿತ್ತು.

ಗ್ರಾಮದ ಜನರು ಜಾತ್ರೆಯ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಬೀಗರು, ಬಿಜ್ಜರನ್ನು ಆಹ್ವಾನಿಸಿದ್ದರು. ಇದೀಗ ದಿಢೀರ್ ಜಾತ್ರೆ ರದ್ದು ಮಾಡಿರುವ ಆದೇಶ ಗ್ರಾಮಸ್ಥರಿಗೆ ತೀವ್ರ ನಿರಾಸೆ ಉಂಟು ಮಾಡಿದೆ.

ಈಗಾಗಲೇ ದೇವರಿಗೆ ಕಂಕಣಾಧಾರಣೆ, ಮಹಾರಥಕ್ಕೆ ಕಳಸಧಾರಣೆ ಆಗಿರುವುದರಿಂದ ಹೆಚ್ಚು ಜನರನ್ನು ಸೇರಿಸದೇ ಹಬ್ಬದ ಆಚರಣೆಗಳನ್ನು ಅತ್ಯಂತ ಸರಳವಾಗಿ ಸಂಪ್ರದಾಯದಂತೆ ಆಚರಿಸಲಾಗುವುದೆಂದು ಮೂಲಗಳು ತಿಳಿಸಿವೆ. 

ಈ ಹಿಂದಿನ ತೀರ್ಮಾನದಂತೆ ಸೋಮವಾರ ಬೆಳಿಗ್ಗೆ 9 ಕ್ಕೆ ಗಜ ಉತ್ಸವ, ಮಧ್ಯಾಹ್ನ 12ಕ್ಕೆ ಹರಿಸೇವೆ, ಮಧ್ಯಾಹ್ನ 3ಕ್ಕೆ ಹನುಮಂತ ದೇವರ ರಥೋತ್ಸವ, ನಂತರ ಭಕ್ತಾದಿಗಳಿಂದ ಹರಕೆ, ಬಾಯಿ ಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳು ಸೇವೆ ನಡೆಯಬೇಕಿತ್ತು. ಇದೇ ದಿನ ತಡರಾತ್ರಿ (ಮಂಗಳವಾರ ಬೆಳಗಿನ ಜಾವ) ಮಹಾರಥೋತ್ಸವ ಮತ್ತು ಮಂಗಳವಾರ ಸಂಜೆ ಮುಳ್ಳೋತ್ಸವವು ಜರುಗಬೇಕಿತ್ತು.

error: Content is protected !!