ವಿದ್ಯುತ್ ತಿದ್ದುಪಡಿ ಮಸೂದೆ 2021ಕ್ಕೆ ರೈತ ಸಂಘಟನೆ ವಿರೋಧ: ಪ್ರತಿಭಟನೆ

ದಾವಣಗೆರೆ, ಆ.10- ವಿದ್ಯುತ್ ತಿದ್ದುಪಡಿ ಮಸೂದೆ 2021ನ್ನು ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. 

ನಂತರ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿ ಕಾರಿಗಳ ಕಚೇರಿಯ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆ ಜಾರಿಗೆ ತಂದಿದ್ದು, ಇವು ರೈತರಿಗೆ ಮರಣ ಶಾಸನವಾಗಿವೆ. ದೆಹಲಿ ಹೆದ್ದಾರಿಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದರೂ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ವಾಪಸ್‌ ಪಡೆಯದೇ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸಕ್ತ ಸಂಸತ್‍ನ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ಮಸೂದೆ 2021ನ್ನು ಮಂಡಿಸುತ್ತಿದೆ. ಈ ಮಸೂದೆಯ ತಿದ್ದುಪಡಿಯಲ್ಲಿ ವಿದ್ಯುತ್ ಕಂಪೆನಿಗಳನ್ನು ಖಾಸಗೀಕರಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ವಿದ್ಯುತ್ ಪೂರೈಕೆ ಖಾಸಗೀಕರಣಗೊಂಡರೆ ರೈತರು, ಕೂಲಿ-ಕಾರ್ಮಿಕರು, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‍ಸೆಟ್, ಬೀದಿ ದೀಪ, ನೀರು ಸರಬರಾಜಿಗೆ ಸರ್ಕಾರದ ಸಬ್ಸಿಡಿ ಕಾರ್ಯಕ್ರಮದಡಿ ಪರಿಹಾರ ನೀಡಿದರೆ ಪಡೆಯಬೇಕಾಗಿದೆ. ಇಲ್ಲದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಆಕ್ಷೇಪಿಸಿದರು.

ಕೇಂದ್ರ ಸರ್ಕಾರ ಈ ಹಿಂದೆ ಅಡುಗೆ ಅನಿಲ ಬಳಕೆ ಮಾಡುತ್ತಿದ್ದಲ್ಲಿ ಸಬ್ಸಿಡಿ ಕೊಡುವುದಾಗಿ ನಂಬಿಸಿ, ಈಗ ವಂಚನೆ ಮಾಡುತ್ತಿದೆ. ಅದೇ ರೀತಿ ರೈತರು ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಬಳಕೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ. ಪ್ರೀಪೇಡ್ ಶುಲ್ಕ ಪಾವತಿಸಿ, ಜನರು ಮೊಬೈಲ್ ಬಳಸುವಂತೆ ಪಂಪ್‍ಸೆಟ್‍ಗಳಿಗೆ ವಿದ್ಯುಚ್ಛಕ್ತಿ ಬಳಸಬೇಕಾಗುವ ಸಂದರ್ಭ ಬರುತ್ತದೆ. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ, ಮಲ್ಲಶೆಟ್ಟಿಹಳ್ಳಿ ಮಂಜುನಾಥ, ಮುಖಂಡರಾದ ನಿರಂಜನ ಗೌಡ, ಎಂ. ಪರಮೇಶ್ವರಪ್ಪ, ಬಸವರಾಜ ದಾಗಿನಕಟ್ಟೆ, ಕರೇಕಟ್ಟೆ ಖಲೀಮ್‌ವುಲ್ಲಾ, ಭರ್ಮಪ್ಪ, ಕಾಳೀಶ ಯಲೋದಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!