ಹೂವಿನಹಡಗಲಿ, ಮಾ.26- ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಮರುವಿಂಗಡನೆ ಆಗಿದ್ದು , ಈ ಮೊದಲು 17 ಕ್ಷೇತ್ರಗಳಿದ್ದರೂ, ಸದಸ್ಯರ ಸಂಖ್ಯೆ ಈಗ 14 ಕ್ಷೇತ್ರಗಳಿಗೆ ಸೀಮಿತವಾಗಿದೆ.
ಈ ಕುರಿತು ರಾಜಕೀಯ ಪಕ್ಷಗಳಾಗಲೀ ಸಾರ್ವಜನಿಕರಾಗಲೀ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಈ ಕ್ಷೇತ್ರಗಳ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡಿರುವ ಸರ್ಕಾರ, ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಈ ಮೊದಲಿದ್ದ ಜನಸಂಖ್ಯೆ ಆಧಾರಿತ ಕ್ಷೇತ್ರಗಳಿಗೆ 12 ಸಾವಿರ ಜನಸಂಖ್ಯೆಯ ನಿಗದಿಪಡಿಸಲಾದರೆ, ಈಗ ಪುನರ್ ವಿಂಗಡನೆ ಹಿನ್ನೆಲೆಯಲ್ಲಿ 15 ಸಾವಿರಕ್ಕೆ ನಿಗದಿಪಡಿಸಿದೆ. ಈ ಕಾರಣಕ್ಕಾಗಿ 3 ಕ್ಷೇತ್ರಗಳು ಬಿಟ್ಟು ಹೋಗಿವೆ ಎಂದು ತಿಳಿದುಬಂದಿದೆ.
ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಐನಳ್ಳಿ, ಸೋವೇನಹಳ್ಳಿ ಮತ್ತು ಹ್ಯಾರಡಾ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಹ್ಯಾರಡಾ ಕ್ಷೇತ್ರವನ್ನು ಕತ್ತೆಬೆನ್ನೂರು, ಕೆ.ಅಯನಳ್ಳಿ ಕ್ಷೇತ್ರವನ್ನು ನಾಗತಿಬಸಾಪುರ, ಸೋವೇನಹಳ್ಳಿ ಕ್ಷೇತ್ರವನ್ನು ಕಾಲ್ವಿ (ಪಶ್ಚಿಮ) ಕ್ಷೇತ್ರಗಳಲ್ಲಿ ವಿಲೀನಗೊಳಿಸಲಾಗಿದೆ.