ದಾವಣಗೆರೆ, ಮಾ.24-ಹದಿನೈದು ದಿನದೊಳಗೆ ಲಾರಿ ತಪಾಸಣೆ ನೆಪದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಸುಲಿಗೆ ನಿಲ್ಲಿಸದೇ ಇದ್ದಲ್ಲಿ ತಪಾಸಣೆ ನಡೆಸುವ ಸ್ಥಳಗಳಲ್ಲಿಯೇ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್ಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಇಂಧನ ಬೆಲೆ ಏರಿಕೆಯಿಂದ ಲಾರಿ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ದಾಖಲೆಗಳಿದ್ದರೂ ಸಾರಿಗೆ ಅಧಿಕಾರಿಗಳು ವಿವಿಧ ನೆಪಗಳನ್ನು ಹೇಳಿ ಲಾರಿ ಮಾಲೀಕರು ಹಾಗೂ ಚಾಲಕರಿಗೆ ಹಣಕ್ಕಾಗಿ ಪೀಡಿಸಿ, ಕಿರುಕುಳು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಿಪ್ಪಾಣಿಯ ಝಳಕಿ, ಕೊಗೆನಾಲಿ ಚೆಕ್ ಪೋಸ್ಟ್ನಿಂದ ಅತ್ತಿಬೆಲೆವರೆಗೆ ರಾತ್ರಿ, ಹಗಲು ಎನ್ನದೆ ಅಧಿಕಾರಿಗಳು ಲಾರಿಗಳನ್ನು ತಡೆಯುತ್ತಿದ್ದಾರೆ. ರಾಜ್ಯದ ಗಡಿಗಳಲ್ಲಿ ಲಂಚ ಕೊಟ್ಟ ನಂತರವೂ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ರಹದಾರಿಗಳಲ್ಲಿ ಮತ್ತೆ ಲಂಚ ನೀಡಬೇಕಾಗುತ್ತದೆ ಎಂದರು.
ಎಸಿಬಿ ಅಧಿಕಾರಿಗಳು ಇದುವರೆಗೂ ಇಂತಹ ಪ್ರದೇಶಗಳ ಕಡೆ ಸುಳಿದಿಲ್ಲ ಎಂದ ಅವರು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಕಿರುಕುಳ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಮುಂದಿನ ಹದಿನೈದು ದಿನಗಳಲ್ಲಿ ಅಧಿಕಾರಿಗಳು ಹೆದ್ದಾರಿಗಳಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸದಿದ್ದರೆ, ತಪಾಸಣೆ ಸ್ಥಳದಲ್ಲಿಯೇ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ, ದಾದಾಪೀರ್, ಭೀಮಣ್ಣ, ಮೊಹ್ಮದ್ ಅಲಿ ಉಪಸ್ಥಿತರಿದ್ದರು.