ದಾವಣಗೆರೆ, ಮಾ.23- ರೋಗಿಗಳು, ಕಾರ್ಮಿಕರು, ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿಜಯಪುರ-ಮಂಗಳೂರು ರೈಲು ಸಮಯವನ್ನು ಬದಲಾಯಿಸಬೇಕು ಎಂದು ದಾವಣಗೆರೆ-ಕರಾವಳಿ ರೈಲ್ವೆ ಹೋರಾಟ ಸಮಿತಿ ಒತ್ತಾಯಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ನಿರ್ಮಲ್ ರಾಜೇಂದ್ರ ಬಂಗೇರ ಅವರು, ಪ್ರಸ್ತುತ ಓಡುತ್ತಿರುವ ಜಯಪುರದಿಂದ ರಾತ್ರಿ 3 ಗಂಟೆಯಿಂದ ಹೊರಟು, ಮಂಗಳೂರು ರೈಲು ಹುಬ್ಬಳ್ಳಿ, ರಾಣೇಬೆನ್ನೂರು, ದಾವಣಗೆರೆ, ಬೀರೂರು, ಹಾಸನ, ಸುಬ್ರಹ್ಮಣ್ಯಂ ಮಾರ್ಗವಾಗಿ ಮಂಗಳೂರನ್ನು ಮಧ್ಯಾಹ್ನ 12 ಗಂಟೆಗೆ ತಲುಪುತ್ತಿದೆ. ಈ ರೈಲು ದಾವಣಗೆರೆಯನ್ನು ಮಧ್ಯರಾತ್ರಿ ತಲುಪುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದರು.
ಈ ರೈಲು ದಾವಣಗೆರೆ ರೈಲ್ವೇ ನಿಲ್ದಾಣವನ್ನು ರಾತ್ರಿ 10 ಗಂಟೆ ವೇಳೆಗೆ ತಲುಪಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಂಗಳೂರು ತಲುಪಿದರೆ ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ, ಬಡರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಸಮಯ ಬದಲಾವಣೆಯಿಂದ ಮುಖ್ಯವಾಗಿ ದಾವಣಗೆರೆ, ಹರಿಹರ ನಗರದಿಂದ ಮಂಗಳೂರು ಹಾಗೂ ಮಣಿಪಾಲ ಆಸ್ಪತ್ರೆಗಳಿಗೆ ಹೋಗುವ ನೂರಾರು ಜನ ರೋಗಿಗಳಿಗೆ ಮತ್ತು ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಪೊಳಲಿ ಮುಂತಾದ ತೀರ್ಥ ಕ್ಷೇತ್ರಗಳನ್ನು ದರ್ಶನ ಮಾಡುವವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಶೀಘ್ರವೇ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ರೈಲ್ವೇ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸುವುದಾಗಿಯೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಹ ಕಾರ್ಯದರ್ಶಿ ಎ.ಫಕೃದ್ದೀನ್, ಸಂಚಾಲಕ ಹೆಚ್.ಎಸ್. ಮಹಾಬಲೇಶ್ ಪೂಜಾರಿ, ರವೀಂದ್ರ ಸಾಣೂರು ಇತರರು ಉಪಸ್ಥಿತರಿದ್ದರು.