ದಾವಣಗೆರೆ, ಮಾ.23- ಪ್ರೊ. ಎಸ್.ಬಿ.ರಂಗನಾಥ್ ಅವರು ಕಳೆದ 6 ದಶಕಗಳಿಂದ ಪ್ರೌಢಶಾಲಾ ಅಧ್ಯಾಪಕ, ಮುಖ್ಯೋಪಾಧ್ಯಾಯ, ಕಿರಿಯ ಕಾಲೇಜಿನ ಪ್ರಾಚಾರ್ಯ, ಶಿಕ್ಷಣ ಮಹಾವಿದ್ಯಾಲ ಯದ ಪ್ರಾಚಾರ್ಯ ಹುದ್ದೆಯಿಂದ ಹಿಡಿದು ತಮ್ಮ ಅನುಭವ, ಬದ್ಧತೆ ಹಾಗೂ ಅರ್ಪಣಾ ಮನೋಭಾವನೆಯಿಂದಾಗಿ, ನಾಡಿನಾದ್ಯಂತ 270ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಂತಹ ಉನ್ನತ ಹುದ್ದೆಯವರೆಗೆ ಏರಿ, ನಿಸ್ಪೃಹತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೇಖಕ, ಅನುವಾದಕ, ಪತ್ರಕರ್ತ ರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಇವರು ಅವಿಭಜಿತ ಚಿತ್ರದುರ್ಗ ಮತ್ತು ವಿಭಜಿತ ದಾವಣಗೆರೆ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ, ಸಿಂಡಿಕೇಟ್, ಸೆನೆಟ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮುಂತಾದವುಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವಿಗಳು. ಅನು ವಾದಗಳು ಸೇರಿದಂತೆ ಇದುವರೆಗೆ ಅವರ 8 ಮೌಲ್ಯಿಕ ಸಾಹಿತ್ಯ ಕೃತಿಗಳು ಹೊರಬಂದಿವೆ.
ಶ್ರೀಯುತರ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ಮಹಾಲಿಂಗ ಪ್ರಶಸ್ತಿ, ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಉತ್ತಮ ಸೇವಾ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
ಬರುವ ಜೂನ್ 17ಕ್ಕೆ ರಂಗನಾಥ್ ಅವರು 80 ಸಾರ್ಥಕ ವಸಂತಗಳನ್ನು ಪೂರೈ ಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರ ಅಭಿ ಮಾನಿಗಳು, ಒಡನಾಡಿಗಳು, ಶಿಷ್ಯ ವರ್ಗ ಹಾಗೂ ಬಂಧು-ಬಳಗದವರು ಜೊತೆಗೂಡಿ ಅವರನ್ನು ಅಭಿನಂದಿಸಿ, ಅಭಿನಂದನಾ ಗ್ರಂಥವನ್ನು ಹೊರತರಲು ಯೋಜಿಸಿರುತ್ತಾರೆ.
ಆದುದರಿಂದ ಪ್ರೊ. ಎಸ್.ಬಿ.ರಂಗನಾಥ್ ಅವರ ಒಡನಾಡಿಗಳು / ಹಿತೈಷಿಗಳು / ಶಿಷ್ಯರು ಶ್ರೀಯುತರನ್ನು ಕುರಿತು ಲೇಖನ ಬರೆದು ಕಳುಹಿಸಲು ವಿನಂತಿಸಿಕೊಳ್ಳುತ್ತೇವೆ. ದಯವಿಟ್ಟು ಜೊತೆಗೆ ಲೇಖಕರ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರವೂ ಇರಲಿ.
ಡಿ.ಟಿ.ಪಿ ಮಾಡಿದ ತಮ್ಮ ಲೇಖನ ಹಾಗೂ ಫೋಟೋ ಮತ್ತು ಪ್ರೊ|| ಎಸ್.ಬಿ.ರಂಗನಾಥ್ ಅವರೊಡನೆ ಒಡನಾಟದ ಯಾವುದಾದರೂ ಫೋಟೋ ಇದ್ದಲ್ಲಿ ಸಂದರ್ಭ ಸಹಿತ ಟಿಪ್ಪಣಿಯೊಡನೆ ಅವುಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಬರುವ ಏಪ್ರಿಲ್ 20 ರೊಳಗೆ [email protected] ಈ ಮಿಂಚಂಚೆಗೆ ಕಳುಹಿಸಲು ಸಮಿತಿ ಪ್ರಧಾನ ಸಂಪಾದಕರಾದ ಡಾ.ನಾ.ಲೋಕೇಶ್ ಒಡೆಯರ್ ಕೋರಿದ್ದಾರೆ.
ಪೂರ್ವಭಾವಿ ಸಭೆ : ನಗರದ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ, ಸಾಹಿತಿ, ಪತ್ರಕರ್ತ, ಶೈಕ್ಷಣಿಕ ಆಡಳಿತಗಾರರಾದ ಪ್ರೊ|| ಎಸ್.ಬಿ.ರಂಗನಾಥ್ ಅವರಿಗೆ ಬರುವ ಜೂನ್ 17ಕ್ಕೆ 80 ವರ್ಷ ತುಂಬುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ, ಅಭಿನಂದನಾ ಗ್ರಂಥವನ್ನು ಅರ್ಪಿಸುವ ಸಂಬಂಧ ಇದೇ ದಿನಾಂಕ ಮಾ.28 ರ ಭಾನುವಾರ ಬೆಳಿಗ್ಗೆ 11ಕ್ಕೆ ಅನುಭವ ಮಂಟಪ ಆವರಣದಲ್ಲಿರುವ ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದಲ್ಲಿ 2ನೇ ಸಭೆಯನ್ನು ಕರೆಯಲಾಗಿದೆ.
ಪ್ರೊ|| ಎಸ್.ಬಿ.ರಂಗನಾಥ್ ಅವರ ಹಿರಿಯ ವಿದ್ಯಾರ್ಥಿಗಳು, ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳು ಆಗಮಿಸಿ, ಸಲಹೆ-ಸೂಚನೆಗಳನ್ನು ನೀಡಲು ನಿವೃತ್ತ ಪ್ರಾಚಾರ್ಯ ಡಾ. ಹೆಚ್.ವಿ.ವಾಮದೇವಪ್ಪ ಕೋರಿದ್ದಾರೆ.