ಚಂಡೀಘಡ, ಮಾ. 23 – ರಾಜ್ಯ ಸರ್ಕಾರ ಜಿನೋಮ್ ಸರಣಿಗಾಗಿ ಸಂಗ್ರಹಿಸಿದ್ದ 401 ಕೊರೊನಾ ಸೋಂಕುಗಳ ಮಾದರಿಯಲ್ಲಿ ಶೇ.81ರಷ್ಟು ಬ್ರಿಟನ್ ರೂಪಾಂತರಿ ಸೋಂಕು ಕಂಡು ಬಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಕೊರೊನಾ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮರೀಂದರ್ ಸಿಂಗ್, ಹೆಚ್ಚು ಜನರಿಗೆ ಲಸಿಕೆ ನೀಡಬೇಕಿದೆ. 60 ವರ್ಷದ ಒಳಗಿನವರೂ ಲಸಿಕೆ ಪಡೆಯಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಕೋವಿಶೀಲ್ಡ್ ಲಸಿಕೆ ಬ್ರಿಟನ್ ರೂಪಾಂತರಿ ವಿರುದ್ಧ ಪರಿಣಾಮಕಾರಿ. ಹೆಚ್ಚು ಲಸಿಕೆ ನೀಡುವುದರಿಂದ ರೋಗ ಹರಡುವ ಸರಣಿ ತುಂಡರಿಸಲ್ಪಡುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.
ಬ್ರಿಟನ್ ರೂಪಾಂತರಿ ಕಳೆದ ಕೆಲ ವಾರಗಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಇದು ವೇಗವಾಗಿ ಹರಡುತ್ತದೆಯಾದರೂ, ತೀವ್ರತೆ ಕಡಿಮೆ ಎಂದು ಡಾ. ಕೆ.ಕೆ. ತಲ್ವಾರ್ ನೇತೃತ್ವದ ರಾಜ್ಯ ಕೋವಿಡ್ ಪರಿಣಿತರ ಸಮಿತಿ ತಿಳಿಸಿದೆ.