ಹರಪನಹಳ್ಳಿ ಜನಜಾಗೃತಿ ಜಾಥಾದಲ್ಲಿ ನ್ಯಾ|| ಉಂಡಿ ಮಂಜುಳಾ ಶಿವಪ್ಪ
ಹರಪನಹಳ್ಳಿ, ಮಾ.22- ಕೊರೊನಾ ಸೋಂಕು ನಿವಾರಿಸುವಲ್ಲಿ ವೈದ್ಯರ ಪಾತ್ರ ಮಹತ್ವ ದಾಗಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಲಭ್ಯವಿದ್ದು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಳ್ಳ ವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ತೆಗ್ಗಿನ ಮಠದ ಆವರಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕೆ.ಪಿ.ಎಂ.ಇ.ಎ., ತಾಲ್ಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ನಾಗರಿಕ ಹಿತರಕ್ಷಣಾ ವೇದಿಕೆ. ಜೆ.ಸಿ.ಐ. ಸ್ಫೂರ್ತಿ, ವರ್ತಕರ ಸಂಘ, ಪತ್ರಕರ್ತರ ಬಳಗ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕೊರೊನಾ ಲಸಿಕೆ ಮತ್ತು ಮಾಸ್ಕ್ ಬಗ್ಗೆ ಕಾಲ್ನಡಿಗೆ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈರಸ್ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಹ ಸಾಂಕ್ರಾಮಿಕ ರೋಗವಾಗಿದೆ. ಕೊರೊನಾ ಲಸಿಕೆಯನ್ನು 60 ವರ್ಷದ ಮೇಲೆ ಹಾಗೂ 45 ವರ್ಷದ ಮೇಲಿನ ಆರೋಗ್ಯ ಸಮಸ್ಯೆಯ ಆಧಾರದ ಮೇಲೆ ಪಡೆಯಬಹುದು. ಲಸಿಕೆ ಬಗ್ಗೆ ಮಾಹಿತಿ ಪಡೆಯಲು ಹತ್ತಿರದ ಯಾವುದೇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬ ಹುದು. ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಮತ್ತು ವೈಯಕ್ತಿಕ ಅಂತರದ ಅಗತ್ಯವಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ಕೊರೊನಾ ಲಸಿಕೆ ಜಾಗೃತಿ ಜಾಥಾ ಪಟ್ಟಣದ ತೆಗ್ಗಿನ ಮಠದಿಂದ ಪ್ರಾರಂಭವಾಗಿ ಪಟ್ಟಣದ ಟಾಕೀಸ್ ರಸ್ತೆ ಪುರಸಭೆ ಮುಖಾಂತರ ಮುಖ್ಯ ರಸ್ತೆ ಮೂಲಕ ಐ.ಬಿ. ವೃತ್ತ ಸೇರಿದಂತೆ, ಸರ್ಕಾರಿ ಆಸ್ಪತ್ರೆವರೆಗೆ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ತೆಗ್ಗಿನ ಮಠದ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಟಿ.ಎಂ. ಚಂದ್ರ ಶೇಖರಯ್ಯ, ತಾಲ್ಲೂಕು ವೈದ್ಯಾಧಿಕಾರಿ ಪಿ.ಕೆ.ವೆಂಕಟೇಶ, ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎನ್. ಮಹೇಶ್, ಉಪಾಧ್ಯಕ್ಷ ಜಿ.ವಿ. ಹರ್ಷ, ಪಿಎಸ್ಐ ಪ್ರಕಾಶ್, ಭಂಗಿ ಬಸಪ್ಪ ಪಿ.ಯು ಕಾಲೇಜು ಪ್ರಾಂಶುಪಾಲ ಅರುಣಕುಮಾರ್, ವೈದ್ಯರುಗಳಾದ ಅನಂತ ಶೆಟ್ಟಿ, ಕೆ.ಎಂ.ಎನ್. ಖಾನ್, ಪ್ರಿಯಾಂಕ್ ಅಧಿಕಾರ್, ಡಾ. ಮಂಜುನಾಥ, ಕಿಶನ್ ಭಾಗವತ್. ಸಂಗೀತಾ, ತಿಪ್ಪೇಸ್ವಾಮಿ, ಶೇಖಾ ನಫ್ತರ್, ಕೊಟ್ರೇಶ್, ತ್ರಿವೇಣಿ, ಜಯಶ್ರೀ, ಅಂಬಿಕಾ, ಆನಂದಗೌಡ, ವಿಶ್ವಾರಾಧ್ಯ, ಪ್ರಶಾಂತ. ವಿವಿಧ ಸಂಘಟನೆಗಳ ಪ್ರಸನ್ನಕುಮಾರ ಜೈನ್, ಹೇಮಣ್ಣ ಮೊರಿಗೇರಿ ಇನ್ನಿತರರಿದ್ದರು.