ದಾವಣಗೆರೆ, ಮಾ. 22 – ತೋಟಗಾರಿಕೆ ಇಲಾಖೆಯು ಚಿತ್ರದುರ್ಗ ಜಿಲ್ಲೆಯ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಐಯ್ಯನಹಳ್ಳಿ ಗ್ರಾಮದಲ್ಲಿನ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2021ರ ಮೇ 3 ರಿಂದ 2022 ರ ಫೆಬ್ರವರಿವರೆಗೆ 10 ತಿಂಗಳ ಅವಧಿಗೆ ವಸತಿ ಸಹಿತ ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದ ಪುರುಷ ಶಿಬಿರಾರ್ಥಿಗಳಿಗೆ ಜಿಲ್ಲೆಯ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮತ್ತು ಮಹಿಳಾ ಶಿಬಿರಾರ್ಥಿಗಳಿಗೆ ಮೈಸೂರು ಜಿಲ್ಲೆಯ ರಂಗಸಮುದ್ರದಲ್ಲಿರುವ ಪ್ರತ್ಯೇಕ ಮಹಿಳಾ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು.
ಅರ್ಜಿಗಳನ್ನು ತೋಟಗಾರಿಕೆ ಉಪ ನಿರ್ದೇಶಕರು(ಜಿ.ಪಂ) ದಾವಣಗೆರೆ/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ದಾವಣಗೆರೆ ಇವರ ಕಚೇರಿಯಲ್ಲಿ ಅಥವಾ ಇಲಾಖೆಯ ವೆಬ್‍ಸೈಟ್ https://horticulturedir.karnataka.gov.inನಲ್ಲಿ ಮಾರ್ಚ್ 24 ರಿಂದ ಏಪ್ರಿಲ್ 17 ರವರೆಗೆ ಕಚೇರಿ ವೇಳೆಯಲ್ಲಿ ಪಡೆಯಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 30, ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ರೂ.15 ನ್ನು ಇಂಡಿಯನ್ ಪೋಸ್ಟಲ್ ಆರ್ಡರ್(ಐಪಿಓ)/ಡಿಮ್ಯಾಂಡ್ ಡ್ರಾಫ್ಟ್(ಡಿಡಿ) ಅನ್ನು Deputy Director of Horticulture (ZP), Davanagere, ಇವರ ಹೆಸರಿನಲ್ಲಿ ಪಡೆದು ಉಪನಿರ್ದೇಶಕರ ಕಛೇರಿ/ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ದಾವಣಗೆರೆ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾವ), ದಾವಣಗೆರೆ ಇವರು ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್ ತಿಳಿಸಿದ್ದಾರೆ.