ಕುಂಬಳೂರು ಹೊಸ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಆಗುವ ಸಾಧ್ಯತೆ
ಮಲೇಬೆನ್ನೂರು, ಮಾ.23- ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ ಅಧಿಕಾರ ಮುಕ್ತಾಯಗೊಳ್ಳಲಿರುವ ಜಿ.ಪಂ. ಮತ್ತು ತಾ.ಪಂ. ಗಳಿಗೆ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಚುನಾವಣೆ ನಡೆಯಬಹುದೆಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹರಿಹರ ತಾಲ್ಲೂಕಿನಲ್ಲಿ ಈಗ ಇರುವ 4 ಜಿ.ಪಂ. ಕ್ಷೇತ್ರಗಳಿಗೆ ಮತ್ತೊಂದು ಹೊಸ ಜಿ.ಪಂ. ಕ್ಷೇತ್ರ ಸೇರ್ಪಡೆಗೊಳ್ಳಲಿದೆ. 15 ತಾ.ಪಂ. ಕ್ಷೇತ್ರಗಳ ಪೈಕಿ 3 ತಾ.ಪಂ. ಕ್ಷೇತ್ರಗಳು ರದ್ದಾಗಿವೆ ಎಂದು ಗೊತ್ತಾಗಿದ್ದು, ಕೊಂಡಜ್ಜಿ, ಬೆಳ್ಳೂಡಿ, ಭಾನುವಳ್ಳಿ, ಹೊಳೆಸಿರಿಗೆರೆ, ಜಿ.ಪಂ. ಕ್ಷೇತ್ರಗಳ ಜೊತೆಗೆ ಕುಂಬಳೂರು ಹೊಸ ಜಿ.ಪಂ. ಕ್ಷೇತ್ರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಂದು ಜಿ.ಪಂ. ಕ್ಷೇತ್ರಕ್ಕೆ ಚುನಾವಣಾ ಆಯೋಗದ ಪ್ರಕಾರ 24 ಸಾವಿರ ಮತದಾರರ ಮೇಲ್ಪಟ್ಟು ಮತ್ತು 30 ಸಾವಿರ ಮತದಾರರ ಒಳಗಡೆ ಇರಬೇಕೆಂದು ಹೇಳಲಾಗಿದೆ. ಹೊಸ ಜಿ.ಪಂ. ಕ್ಷೇತ್ರ ಆಗಲಿರುವ ಕುಂಬಳೂರಿಗೆ ಕುಂಬಳೂರು, ಹರಳಹಳ್ಳಿ, ಹಾಲಿವಾಣ, ಕುಣೆಬೆಳಕೆರೆ, ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಇದು ಗೆಜೆಟ್‌ನಲ್ಲಿ ಬಂದಾಗ ಮಾತ್ರ ಅಧಿಕೃತವಾಗಲಿದೆ.
ಈ ಹಿಂದಿನ ಜಿ.ಪಂ. ಚುನಾವಣೆಯಲ್ಲಿ ಕುಂಬಳೂರು, ಹಾಲಿವಾಣ, ಹರಳಹಳ್ಳಿ, ಭಾನುವಳ್ಳಿ, ಜಿ.ಪಂ. ಕ್ಷೇತ್ರದಲ್ಲಿದ್ದವು. ಕುಣೆಬೆಳಕೆರೆ ಗ್ರಾ.ಪಂ., ಬೆಳ್ಳೂಡಿ ಜಿ.ಪಂ., ಭಾನುವಳ್ಳಿ ಜಿ.ಪಂ. ಕ್ಷೇತ್ರಗಳ ಭಾನುವಳ್ಳಿಯ ಜೊತೆಗೆ ಹೊಳೆಸಿರಿಗೆರೆ ಜಿ.ಪಂ. ಕ್ಷೇತ್ರದಲ್ಲಿದ್ದ ಯಲವಟ್ಟಿ, ಜಿಗಳಿ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳು ಸೇರಲಿವೆ.
ಹೊಳೆಸಿರಿಗೆರೆ, ಜಿ.ಪಂ. ಕ್ಷೇತ್ರಕ್ಕೆ ಹೊಳೆಸಿರಿಗೆರೆ, ಕೆ.ಎನ್. ಹಳ್ಳಿ, ವಾಸನ, ಉಕ್ಕಡಗಾತ್ರಿ, ಕೊಕ್ಕನೂರು ಗ್ರಾ.ಪಂ. ಗಳ ಜೊತೆಗೆ ಬೆಳ್ಳೂಡಿ ಕ್ಷೇತ್ರದಲ್ಲಿದ್ದ ಎಳೆಹೊಳೆ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳು ಸೇರಲಿವೆ. ಬೆಳ್ಳೂಡಿ ಜಿ.ಪಂ. ಕ್ಷೇತ್ರಕ್ಕೆ ಬೆಳ್ಳೂಡಿ, ಬನ್ನಿಕೋಡು, ಕೆ. ಬೇವಿನಹಳ್ಳಿ, ಸಾಲಕಟ್ಟಿ ಗ್ರಾ.ಪಂ.ಗಳ ಜೊತೆಗೆ ಭಾನುವಳ್ಳಿ ಕ್ಷೇತ್ರದಲ್ಲಿದ್ದ ದೇವರ ಬೆಳಕೆರೆ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಲಾಗಿದೆ.
ಕೊಂಡಜ್ಜಿ ಜಿ.ಪಂ. ಕ್ಷೇತ್ರಕ್ಕೆ ಕೊಂಡಜ್ಜಿ, ಸಾರಥಿ, ಹನಗವಾಡಿ, ರಾಜನಹಳ್ಳಿ ಗ್ರಾ.ಪಂ.ಗಳ ಜೊತೆಗೆ ನಂದಿಗಾವಿ ಗ್ರಾ.ಪಂ. ಅನ್ನು ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಲ್ಲಿದ್ದ ಗುತ್ತೂರು, ಹರಿಹರ ನಗರಸಭೆ ವ್ಯಾಪ್ತಿಗೆ ಸೇರಿರುವುದರಿಂದ ಆ ಊರನ್ನು ಕೈ ಬಿಡಲಾಗಿದೆ.
ಹರಿಹರ ತಾ.ಪಂ.ಗೆ ಹಾಲಿ ಇರುವ 15 ಕ್ಷೇತ್ರಗಳ ಪೈಕಿ ಗುತ್ತೂರು, ಕುಣೆಬೆಳಕೆರೆ, ಎಳೆಹೊಳೆ ಕ್ಷೇತ್ರಗಳು ರದ್ದಾಗಲಿವೆ ಎಂದು ಹೇಳಲಾಗುತ್ತಿದ್ದು, ಇನ್ನೂ ಅಧಿಕೃತವಾಗಿಲ್ಲ. ಒಂದು ವೇಳೆ ಹಾಗೆ ಆಗದಿದ್ದಲ್ಲಿ ರದ್ದಾಗುವ ಕ್ಷೇತ್ರಗಳ ಪೈಕಿ ಗುತ್ತೂರು ಕ್ಷೇತ್ರಗಳ ಹಳ್ಳಿಗಳನ್ನು ಸಿರಿಗೆರೆ, ವಾಸನ ಕ್ಷೇತ್ರಗಳಿಗೆ ಸೇರಿಸಬಹುದು.
ಕುಣೆಬೆಳಕೆರೆ ತಾ.ಪಂ. ಕ್ಷೇತ್ರಗಳ ಹಳ್ಳಿಗಳನ್ನು ದೇವರ ಬೆಳಕೆರೆ, ಕುಂಬಳೂರು, ಬನ್ನಿಕೋಡು ತಾ.ಪಂ. ಕ್ಷೇತ್ರಗಳಿಗೆ ಸೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತಾ.ಪಂ.ನ ಮೂರು ಕ್ಷೇತ್ರಗಳು ರದ್ದಾದರೆ, ಹಾಲಿವಾಣ, ದೇವರಬೆಳಕೆರೆ, ಕುಂಬಳೂರು, ಬನ್ನಿಕೋಡು, ಜಿಗಳಿ, ಕೊಕ್ಕನೂರು, ವಾಸನ, ಹೊಳೆಸಿರಿಗೆರೆ, ಭಾನುವಳ್ಳಿ, ರಾಜನಹಳ್ಳಿ, ಬೆಳ್ಳೂಡಿ, ಕೊಂಡಜ್ಜಿ ತಾ.ಪಂ. ಕ್ಷೇತ್ರಗಳು ಉಳಿಯಲಿವೆ.
ಮೂಲಗಳ ಪ್ರಕಾರ ಈ ತಿಂಗಳ ಕೊನೆಯಲ್ಲಿ ಅಥವಾ ಏಪ್ರಿಲ್‌ನಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದ್ದು, ಜೊತೆಗೆ ಮೀಸಲಾತಿಗಳೂ ನಿಗದಿಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈ ಕುರಿತು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರನ್ನು ಸಂಪರ್ಕಿಸಿದಾಗ, ಹೊಸ ಜಿ.ಪಂ. ಕ್ಷೇತ್ರ ರಚಿಸುವ ಬಗ್ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷದವರ ಅಭಿಪ್ರಾಯ ಸಂಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸ ಲಾಗಿದೆ. ಯಾವ ಕ್ಷೇತ್ರ ಹೊಸದಾಗಲಿದೆ ಎಂಬ ಬಗ್ಗೆ ಹೇಳುವುದಕ್ಕೆ ಆಗಲ್ಲ. ಅದನ್ನು ಚುನಾವಣಾ ಆಯೋಗ ತೀರ್ಮಾನಿಸುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಅವರ ಪ್ರಕಾರ ಕುಂಬಳೂರು ಹೊಸ ಜಿ.ಪಂ. ಕ್ಷೇತ್ರ ಆಗಬೇಕು. ಕುಂಬಳೂರು, ಹರಳಹಳ್ಳಿ, ಹಾಲಿ ವಾಣ, ದೇರಬೆಳಕೆರೆ ಗ್ರಾ.ಪಂ. ಗಳನ್ನು ಸೇರಿಸಿ ಕುಂಬಳೂರು ಕ್ಷೇತ್ರ ಮಾಡಿ ಎಂದಿದ್ದಾರೆ ಎಂದರು.
ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ ಅವರು ಕೊಕ್ಕನೂರು, ಜಿಗಳಿ, ಹಾಲಿವಾಣ, ಹರಳಹಳ್ಳಿ ಗ್ರಾ.ಪಂ.ಗಳನ್ನು ಸೇರಿಸಿ, ಕೊಕ್ಕನೂರು ಜಿ.ಪಂ. ಕ್ಷೇತ್ರ ರಚಿಸುವಂತೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಜಿಗಳಿ ಪ್ರಕಾಶ್,
[email protected]